ಉಗ್ರ ಮಸೂದ್ ಅಜರ್ ಗೆ ಶಾಪ ನೀಡಿದ್ದರೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವಾದರೂ ಇರುತ್ತಿರಲಿಲ್ಲ: ಸಾಧ್ವಿ ಪ್ರಜ್ನಾ ಹೇಳಿಕೆಗೆ ದಿಗ್ವಿಜಯ್ ಸಿಂಗ್ ವ್ಯಂಗ್ಯ

ಭೋಪಾಲ್​: ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಅವರು ಜೈಶ್​​-ಎ- ಮೊಹಮ್ಮದ್​ ಉಗ್ರಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ಗೆ ಶಾಪ ನೀಡಿದ್ದರೆ ಸರ್ಜಿಕಲ್​ ಸ್ಟ್ರೈಕ್​ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಎಟಿಎಸ್​ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆಯವರು ನನ್ನ ಶಾಪದಿಂದ ಸಾವನ್ನಪ್ಪಿದ್ದಾರೆ ಎಂದು ಸಾಧ್ವಿ ಪ್ರಜ್ನಾ ಹೇಳಿದ್ದಾರೆ. ಉಗ್ರ ಮಸೂದ್ ಅಜರ್ ವಿರುದ್ಧವಾದರೂ ಸಾಧ್ವಿ ಶಾಪ ಹಾಕಿದ್ದರೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವಾದರೂ ಇರುತ್ತಿರಲಿಲ್ಲ ಎಂದಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವ್ಯಕ್ತಿ ಹೇಮಂತ್ ಕರ್ಕರೆ. ಅವರ ಬಗ್ಗೆ ತಾವು ಶಾಪ ಹಾಕಿದ್ದಕ್ಕೇ ಸತ್ತರು ಎಂದು ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಗುಡುಗಿದ ದಿಗ್ವಿಜಯ್, ಉಗ್ರರು ನರಕದಲ್ಲೇ ಅಡಗಿದ್ದರೂ ಅವರನ್ನು ಹುಡುಕಿ ಬೇಟೆಯಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ಪುಲ್ವಾಮಾ, ಪಠಾಣ್​ಕೋಟ್​, ಉರಿ ದಾಳಿಗಳು ನಡೆದಾಗ ಅವರು ಎಲ್ಲಿದ್ದರು? ಇಂಥ ದಾಳಿಗಳು ಆಗದಂತೆ ತಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಹಿಂದು-ಮುಸ್ಲಿಂ-ಸಿಖ್​-ಕ್ರಿಶ್ಚಿಯನ್​ ಸೇರಿ ಎಲ್ಲ ಧರ್ಮೀಯರೂ ಸೋದರರು. ಹಿಂದುಗಳು ಒಗ್ಗಟ್ಟಾಗಿರಬೇಕು. ಹಿಂದು ಧರ್ಮ ಅಪಾಯದಲ್ಲಿದೆ ಎಂದು ಇವರೆಲ್ಲ ಹೇಳುತ್ತಾರೆ. ಆದರೆ ಈ ದೇಶವನ್ನು ಸುಮಾರು 500 ವರ್ಷಗಳ ಕಾಲ ಮುಸ್ಲಿಮರೇ ಆಳಿದ್ದಾರೆ. ಉಳಿದ ಧರ್ಮಗಳಿಗೆ ಯಾವುದೇ ಹಾನಿ ಮಾಡಿಲ್ಲ. ಧರ್ಮವನ್ನು ಮಾರಾಟಕ್ಕೆ ಇಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ನಮ್ಮ ಧರ್ಮದಲ್ಲಿ ಹರಹರ ಮಹದೇವ ಎನ್ನುತ್ತೇವೆ. ಆದರೆ ಬಿಜೆಪಿ ಹರ ಹರ ಮೋದಿ ಎನ್ನುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಗೂಗಲ್​ನಲ್ಲಿ ಫೇಕ್(ಸುಳ್ಳುಗಾರ) ಎಂದು ಕೊಟ್ಟರೆ ಯಾರ ಫೋಟೋ ಬರುತ್ತದೆ ಎಂಬುದು ನಮಗೆಲ್ಲ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Would not have needed surgical strikes if Sadhvi cursed Masood Azhar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ