ಮಹತ್ವದ ಚರ್ಚೆ ನಡೆಸಿದ ಜೆಡಿಎಸ್-ಕಾಂಗ್ರೇಸ್ ನಾಯಕರು

ಬೆಂಗಳೂರು, ಏ.28-ಲೋಕಸಭಾ ಚುನಾವಣೆ ಮುಗಿದ ನಂತರ ಸರ್ಕಾರ ಅಸ್ಥಿರಗೊಳಿಸಲು ಸದ್ದಿಲ್ಲದೆ ನಡೆಯುತ್ತಿರುವ ಆಪರೇಷನ್ ಕಮಲಕ್ಕೆ ಮರ್ಮಾಘಾತ ನೀಡಲು ಇಂದು ಜೆಡಿಎಸ್-ಕಾಂಗ್ರೆಸ್‍ನ ನಾಯಕರು ಮಹತ್ವದ ಚರ್ಚೆ ನಡೆಸುವ ಮೂಲಕ ಪ್ರತಿತಂತ್ರ ರೂಪಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‍ನಲ್ಲಿ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಸಂಬಂಧಪಟ್ಟಂತೆ ಚರ್ಚೆ ನಡೆಸುವ ಸಲುವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪರಸ್ಪರ ಭೇಟಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‍ಖರ್ಗೆ ಈ ಸಂದರ್ಭದಲ್ಲಿ ಹಾಜರಿದ್ದರು.

ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಭೇಟಿಯಾಗುತ್ತಿರುವ ವೇಣುಗೋಪಾಲ್ ಮತ್ತು ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಸುಭದ್ರತೆಯ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ಪತನಗೊಳಿಸಲು ಆಪರೇಷನ್ ಕಮಲಕ್ಕೆ ಕೈ ಹಾಕಿದೆ.ಈಗಾಗಲೇ ಕಾಂಗ್ರೆಸ್‍ನ ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾಗಿದೆ. ಅವರ ಬೆನ್ನಲ್ಲೇ ಶಾಸಕ ರಮೇಶ್ ಜಾರಕಿ ಹೊಳಿ ಕೂಡ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನ ಸಿಗದೆ ಕಾಂಗ್ರೆಸ್‍ನಲ್ಲಿ ಬಹಳಷ್ಟು ಮಂದಿ ಅತೃಪ್ತರಾಗಿದ್ದಾರೆ. ಪಕ್ಷದಲ್ಲಿ ಹಿರಿಯರಾಗಿದ್ದರೂ ಕೂಡ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂಬ ಅತೃಪ್ತಿ ಶಾಸಕರಾದ ಅಮರೇಗೌಡ ಬೈಯ್ಯಾಪುರ, ಆನಂದ್‍ಸಿಂಗ್, ಶಾಮನೂರು ಶಿವಶಂಕರಪ್ಪ, ರೋಷನ್‍ಬೇಗ್, ಎನ್.ಎ.ಹ್ಯಾರೀಸ್, ಪ್ರತಾಪ್‍ಗೌಡ ಪಾಟೀಲ್, ಬಿ.ಕೆ.ಸಂಗಮೇಶ್, ಕೃಷ್ಣಪ್ಪ, ಪಿ.ಟಿ.ಪರಮೇಶ್ವರ್‍ನಾಯಕ್, ಲಕ್ಷ್ಮಿಹೆಬ್ಬಾಳ್ಕರ್, ಡಾ.ಸುಧಾಕರ್, ಅಜಯ್‍ಸಿಂಗ್, ಬಿ.ಸಿ.ಪಾಟೀಲ್ ಮತ್ತಿತರ ನಾಯಕರನ್ನು ಕಾಡುತ್ತಿದೆ.

ಈ ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ.ಉಮೇಶ್ ಜಾಧವ್ ಅವರ ಜೊತೆಯಲ್ಲೇ ಬಾಲಚಂದ್ರ ಜಾರಕಿ ಹೊಳಿ, ಮಹೇಶ್ ಕಮಟಳ್ಳಿ, ನಾಗೇಂದ್ರ, ಕಂಪ್ಲಿ ಗಣೇಶ್ ಮತ್ತಿತರರು ರಾಜೀನಾಮೆ ಕೊಡಬೇಕಿತ್ತು.ಆದರೆ ಲೋಕಸಭೆ ಚುನಾವಣೆ ಕಾರಣದಿಂದಾಗಿ ಇವರು ರಾಜೀನಾಮೆ ನೀಡದೆ ಸದ್ಯಕ್ಕೆ ಕಾಂಗ್ರೆಸ್‍ನಲ್ಲೇ ಮುಂದುವರೆದಿದ್ದಾರೆ. ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ.

ಇತ್ತೀಚೆಗೆ ಬಾಲಚಂದ್ರ ಜಾರಕಿ ಹೊಳಿ ಇನ್ನಷ್ಟು ಅತೃಪ್ತರನ್ನು ಸೆಳೆದು ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು.

ಆದರೆ ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅತೃಪ್ತರು ಹೇಳಿದ್ದರಿಂದಾಗಿ ರಮೇಶ್ ಜಾರಕಿ ಹೊಳಿ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಸಮ್ಮಿಶ್ರ ಸರ್ಕಾರಕ್ಕೆ ನನ್ನಿಂದ ಅಪಾಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿ ಗೋಕಾಕ್‍ಗೆ ತೆರಳಿದ್ದಾರೆ.

ಬಿಜೆಪಿ ತೆರೆಮರೆಯಲ್ಲಿ ತನ್ನ ಪ್ರಯತ್ನ ಮುಂದುವರೆಸಿದ್ದು, ಅತೃಪ್ತರನ್ನು ಸೆಳೆಯುವ ಕಾರ್ಯಾಚರಣೆ ಮುಂದುವರೆಸಿದೆ. ಇದಕ್ಕಾಗಿ ಈ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಒಂದು ಸುತ್ತಿನ ಸಭೆ ನಡೆಸಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಯಾವ ರೀತಿಯ ತಿರುಗೇಟು ನೀಡಬೇಕು ಎಂದು ವೇಣುಗೋಪಾಲ್ ಮತ್ತು ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.

ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾದರೆ, ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ದೋಸ್ತಿ ನಾಯಕರೂ ಕೂಡ ಮುಲಾಜಿಲ್ಲದೆ ಬಿಜೆಪಿ ಶಾಸಕರನ್ನು ಕರೆತರಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಈ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದ್ದು, ಬಿಜೆಪಿ ತೊರೆದು ಬರುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಲು ಬದ್ಧವಾಗಿದೆ.ಸರ್ಕಾರ ಅಸ್ಥಿರಗೊಳಿಸುವ ಸಲುವಾಗಿ ಬಿಜೆಪಿ ಜೊತೆ ಸಂಪರ್ಕದಲ್ಲಿರುವ ಶಾಸಕರನ್ನು ಪ್ರಜ್ಞಾಪೂರ್ವಕವಾಗಿಯೇ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಚರ್ಚೆಗಳು ನಡೆದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ