ಬೆಂಗಳೂರು, ಏ.28- ಒಂದೆಡೆ ಆಪರೇಷನ್ ಕಮಲದ ಭೀತಿ ದೋಸ್ತಿ ಸರ್ಕಾರವನ್ನು ಕಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಒಳವಲಯದಲ್ಲೇ ಸಮಾನ ಮನಸ್ಕ ಶಾಸಕರು ಏ.30ರಂದು ಸಭೆ ಸೇರಲಿದ್ದಾರೆ.
ಏ.30ರ ಬೆಳಗ್ಗೆ ನಗರದ ಖಾಸಗಿ ಹೋಟೆಲ್ವೊಂದರಲ್ಲಿ ನಡೆಯುವ ಸಭೆಗೆ ಆಗಮಿಸುವಂತೆ ಯಶವಂತಪುರ ಕ್ಷೇತ್ರದ ಶಾಸಕ ಹಾಗೂ ಬಿಎಡಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಎಲ್ಲರಿಗೂ ಆಹ್ವಾನ ಪತ್ರ ಕಳುಹಿಸಿದ್ದಾರೆ.
ಸಚಿವ ಸ್ಥಾನ ಸಿಗದೆ ಬಿಡಿಎ ಅಧ್ಯಕ್ಷ ಸ್ಥಾನ ಸಿಕ್ಕಿರುವ ಸೋಮಶೇಖರ್ ಅವರು ಈ ಮೊದಲು ಬಹಿರಂಗವಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ಬಿಡಿಎಗೆ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅದರ ಬೆನ್ನಲ್ಲೇ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಬಿಡಿಎಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಡಿಎ ಅಧ್ಯಕ್ಷನಾಗಿ ನನ್ನ ಯಾವ ಮಾತುಗಳು ನಡೆಯುತ್ತಿಲ್ಲ. ಎಲ್ಲವೂ ನಿವೃತ್ತ ಅಧಿಕಾರಿಯ ಮಾತಿನಂತೆಯೇ ನಡೆಯುತ್ತಿದೆ. ಹೀಗಿದ್ದ ಮೇಲೆ ನಾನು ಅಧ್ಯಕ್ಷನಾಗಿ ಏಕೆ ಮುಂದುವರೆಯಬೇಕು ಎಂದು ಸೋಮಶೇಖರ್ ಪ್ರಶ್ನಿಸಿದ್ದರು.
ನಿವೃತ್ತ ಅಧಿಕಾರಿಯನ್ನು ಕೂಡಲೇ ಬಿಡಿಎಯಿಂದ ಎತ್ತಂಗಡಿ ಮಾಡಿ ಎಂದು ಹಲವು ಬಾರಿ ಒತ್ತಡ ಹಾಕಿದ್ದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಸೋಮಶೇಖರ್ಗೆ ಧ್ವನಿಗೂಡಿಸಿದ್ದರು.
ಲೋಕಸಭೆ ಚುನಾವಣೆಗೂ ಮುನ್ನ ಅಧಿಕಾರಿಯ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿತ್ತು.
ಅಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಮಾಹಿತಿಗಳಿದ್ದವು. ಅದೇ ಸಮಯವನ್ನು ಮುಂದಿಟ್ಟುಕೊಂಡ ಸೋಮಶೇಖರ್ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕಾದರೆ ತಮ್ಮ ಕೆಲವು ಬೇಡಿಕೆಗಳು ಈಡೇರಬೇಕೆಂದು ಷರತ್ತುಗಳನ್ನು ವಿಧಿಸಿದ್ದರು.
ಆದರೆ, ರಾಜಕೀಯ ಬದಲಾವಣೆಯಲ್ಲಿ ದೇವೇಗೌಡರು ಬೆಂಗಳೂರು ಉತ್ತರದ ಬದಲಾಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಬೆಂಗಳೂರು ಉತ್ತರ ಕಾಂಗ್ರೆಸ್ ಪಾಲಿಗೆ ಉಳಿದಿದ್ದರಿಂದ ಎಸ್.ಟಿ.ಸೋಮಶೇಖರ್ ಹಾಗೂ ಇತರ ಶಾಸಕರ ಬೇಡಿಕೆಗಳು ಈಡೇರಲೇ ಇಲ್ಲ.
ಶಾಸಕರ ಜತೆ ಚರ್ಚಿಸಲು ಸಿಎಂ ಸಭೆಯನ್ನೂ ನಡೆಸಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಕೆಲವರು ಸಮಾನ ಮನಸ್ಕರ ವೇದಿಕೆಯನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸಭೆ ಕರೆಯಲಾಗಿದೆ. ಮಂಗಳವಾರ ಬೆಳಗ್ಗೆ ನಡೆಯುವ ಈ ಸಭೆ ಅತ್ಯಂತ ಕುತೂಹಲ ಕೆರಳಿಸಿದ್ದು, ಎಷ್ಟು ಮಂದಿ ಭಾಗವಹಿಸುತ್ತಾರೆ ? ಏನೆಲ್ಲಾ ಚರ್ಚೆಗಳು ನಡೆಯುತ್ತವೆ ಎಂಬುದು ಮುಂದಿನ ದಿನಗಳಲ್ಲಿ ದೋಸ್ತಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.