ಬೆಂಗಳೂರು,ಏ.28- ದೇಶದಲ್ಲಿ ಪ್ರಸ್ತುತ ಲೋಕಸಭೆಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಬಿಬಿಎಂಪಿಯಲ್ಲಿ ಮುಖ್ಯಮಂತ್ರಿಗಳ ನವಬೆಂಗಳೂರು ಯೋಜನೆಯಡಿ ಪ್ರಾರಂಭಿಸಲು ಉದ್ದೇಶಿಸಿರುವ ಕಾಮಗಾರಿಗಳಿಗೆ ಅವಕಾಶ ನೀಡಬಾರದೆಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರಿಗೆ ಪತ್ರ ಬರೆದಿರುವ ಬಿಜೆಪಿ ಮುಖಂಡರಾದ ಆರ್.ಅಶೋಕ್, ಅರವಿಂದಲಿಂಬಾವಳಿ, ಎಸ್.ಮುನಿರಾಜು, ಸದಾಶಿವ ಅವರುಗಳು ಕುಡಿಯುವ ನೀರು ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದಾರೆ.
ಶನಿವಾರ ಪಾಲಿಕೆ ಸಭೆಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಮತ್ತು ಎಸ್‍ಐಪಿ ಯೋಜನೆಯಡಿ 4261 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೆಆರ್‍ಐಡಿಎಲ್ ಸಂಸ್ಥೆಗೆ ನೀಡಿರುವುದರಿಂದ ಟೆಂಡರ್ ಇಲ್ಲದೆ ಕಾಮಗಾರಿ ನಡೆಸಲುಪ್ರಾರಂಭಿಸಿರುವುದು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಆಕ್ಷೇಪಿಸಿದೆ.
ಮೇ 27ರವರೆಗೆ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕೆಂದು ಬಿಜೆಪಿ ಮನವಿ ಮಾಡಿದೆ.
ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‍ಕುಮಾರ್ ಅವರನ್ನು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನೀತಿ ನಿರೂಪಣೆಗೆ ಸಂಬಂಧಿಧಿಸದೆ ಯಾವುದೇ ಹೊಸ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಅವರ ಸಲಹೆಯನ್ನು ಧಿಕ್ಕರಿಸಿ ಕಾಮಗಾರಿಗಳನ್ನು ಆರಂಭಿಸಲು ಮುಂದಾಗಿರುವುದರ ಹಿಂದೆ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ. 4261 ಕೋಟಿ ವೆಚ್ಚದ ಕಾಮಗಾರಿಯನ್ನು ಕೆಆರ್‍ಐಡಿಎಲ್‍ಗೆ ವಹಿಸಿರುವ ತೀರ್ಮಾನದ ಹಿಂದೆ ಸ್ವಹಿತಾಸಕ್ತಿ ಅಡಗಿದೆ. ಮತದಾನಕ್ಕೂ ಮುನ್ನ ಕೆಲವು ಪ್ರಭಾವಿ ಗುತ್ತಿಗೆದಾರರಿಂದ ಲಂಚ ಪಡೆದಿರುವ ಆಡಳಿತ ಪಕ್ಷದ ಮುಖಂಡರು ಗುತ್ತಿಗೆ ಕಾಮಗಾರಿ ನೀಡುವ ಮೂಲಕ ಅನುಕೂಲ ಮಾಡಲು ಹೊರಟಿದ್ದಾರೆ.
ಚುನಾವಣಾ ಆಯೋಗ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ದೇಶದ ಯಾವುದೇ ಭಾಗದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬೃಹತ್ ಮೊತ್ತದ ಕಾಮಗಾರಿಗಳನ್ನು ಪ್ರಾರಂಭಿಸಲು ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಪ್ರಾರಂಭಿಸಬೇಕಿದ್ದರೆ ಆಯೋಗದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ರಾಜುಕಾಲುವೆ ಹೂಳುತ್ತೆವು ಕಾಮಗಾರಿಯನ್ನು ತುರ್ತಾಗಿ ಕರೆಯಬೇಕಿರುವುದರಿಂದ ಟೆಂಡರ್ ಕರೆಯಲು ತೀರ್ಮಾನಿಸಿದ್ದೇವೆ ಎಂದು ಪಾಲಿಕೆ ಮೇಯರ್ ಹೇಳಿರುವುದು ನೇರವಾಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ.ಯಾರ ಹಿತವನ್ನು ಕಾಯಲು ಪಾಲಿಕೆ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಲಾಗಿದೆ.
ಪಾಲಿಕೆಯ ಆತುತಾತುರುವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಆಯೋಗ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.