ಬೆಂಗಳೂರು, ಏ.28-ನಾನು ನಿಮ್ಮನ್ನು ಬಹಿಷ್ಕರಿಸಿದ್ದೇನೆ, ಅದೇನು ಚರ್ಚೆ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಇನ್ನು ಮುಂದೆ ನಾನು ನಿಮ್ಮ ಜೊತೆ ಮಾತನಾಡುವುದಿಲ್ಲ… ಹೀಗೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಮುನಿಸು ತೋರಿಸಿದ್ದಾರೆ.
ನಗರದ ಅಶೋಕ ಹೊಟೇಲ್ನಲ್ಲಿಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರ ಜೊತೆ ಸಭೆ ನಡೆಸಿದ ಕುಮಾರಸ್ವಾಮಿ ಅವರು, ಅಲ್ಲಿಂದ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು.
ನಿಮ್ಮಲ್ಲಿನ ಚರ್ಚೆ, ಸುದ್ದಿಗಳಿಗೆ ನಾನು ಬಹಿಷ್ಕಾರ ಹಾಕಿದ್ದೇನೆ (ಐ ಆ್ಯಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಅದೇನು ಸ್ಟೋರಿ ಮಾಡ್ತೀರೋ, ಅದೇನು ಚರ್ಚೆ ಮಾಡ್ತಿರೋ ಮಾಡ್ಕೊಳ್ಳಿ.ಇನ್ಮುಂದೆ ನಾನು ನಿಮ್ಜೊತೆ ಮಾತಾಡಬಾರ್ದು ಎಂದು ತೀರ್ಮಾನ ಮಾಡಿದ್ದೇನೆ. ಸ್ಟೋರಿ, ಚರ್ಚೆ ಮಾಡ್ಕೊಂಡು ಮಜಾ ಮಾಡ್ಕೊಳ್ಳಿ ಎಂದು ಹೇಳಿ ಸಿಎಂ ತೆರಳಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರು ಮಾಧ್ಯಮಗಳ ವಿರುದ್ಧ ಇದೇರೀತಿ ಹರಿಹಾಯ್ದಿದ್ದರು. ಚುನಾವಣೆ ವೇಳೆ ಅಸಮಾಧಾನಗೊಂಡಿದ್ದ ಮಾಧ್ಯಮಗಳ ಜೊತೆ ಶಾಂತಚಿತ್ತರಾಗಿಯೇ ಮಾತನಾಡುತ್ತಿದ್ದರು. ಇತ್ತೀಚೆಗೆ ರಮೇಶ್ ಜಾರಕಿ ಹೊಳಿ ವಿಷಯದಲ್ಲಿ ಮಾಧ್ಯಮಗಳು ಅತ್ಯಧಿಕ ಪ್ರಚಾರ ನೀಡಿದ್ದ ವಿಚಾರವಾಗಿ ಸಿಟ್ಟಾಗಿರುವ ಸಿಎಂ ಅವರು ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.