ಬೆಂಗಳೂರು, ಏ.27- ಬಾವಿಯನ್ನು ಸ್ವಚ್ಛಗೊಳಿಸಲು ಇಳಿದ್ದಿದ ಇಬ್ಬರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಮೋದಿ ರಸ್ತೆ ನಿವಾಸಿ ಚೋಟು ಮತ್ತು ಡಿ.ಜೆ.ಹಳ್ಳಿ ನಿವಾಸಿ ಗಫೂರ್ ಮೃತಪಟ್ಟ ದುರ್ದೈವಿಗಳು.
ಇಂದು ಬೆಳಿಗ್ಗೆ 11ಗಂಟೆ ಸುಮಾರಿನಲ್ಲಿ ಕೆ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆ ಬಳಿಯ ಟೀ ಅಂಗಡಿಯೊಂದರ ಹಿಂಭಾಗವಿದ್ದ ಬಾವಿಯನ್ನು ಸ್ವಚ್ಛಗೊಳಿಸಲು ಮೊದಲು ಚೋಟು ಇಳಿದಿದ್ದಾರೆ. ಕೆಲ ನಿಮಿಷದಲ್ಲೇ ಈತ ಕೂಗಿಕೊಂಡಿದ್ದನ್ನು ಗಮನಿಸಿದ ಅಲ್ಲಿದ್ದವರು ನೋಡುವಂತೆ ಗಫೂರ್ಗೆ ತಿಳಿಸಿದ್ದಾರೆ.
ಚೋಟುವನ್ನು ರಕ್ಷಿಸಲು ಗಫೂರ್ ಬಾವಿಗೆ ಇಳಿದಿದ್ದಾನೆ. ಆದರೆ ಸಾಧ್ಯವಾಗದೆ ಇಬ್ಬರೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸುತ್ತಮುತ್ತಲಿನ ನಿವಾಸಿಗಳು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಾವಿಯಿಂದ ಎರಡು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.