ಬೆಂಗಳೂರು, ಏ.27- ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, 2019-2024ನೆ ಸಾಲಿನ ಅವಧಿಗೆ ಎಲ್ಲ ಹಂತಗಳ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ.
ಸಂಘದ ಜಿಲ್ಲಾ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗಳು ಮೇ 27ರಿಂದ ಜೂನ್ 13ರ ವರೆಗೂ ನಡೆಯಲಿವೆ ಎಂದು ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿ 2019-2024ನೆ ಸಾಲಿನ ಅವಧಿಗೆ ಎಲ್ಲ ಹಂತದ ಚುನಾವಣೆಗಳನ್ನು ನಡೆಸಲು ದಿನಾಂಕಗಳನ್ನು ಘೋಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳನ್ನು ಜೂನ್ 17 ರಿಂದ 27ರ ವರೆಗೆ ನಡೆಸಲಾಗುತ್ತದೆ. ಹಾಗೆಯೇ ಜಿಲ್ಲಾ ಶಾಖೆ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳನ್ನು ಜುಲೈ 1 ರಿಂದ 11ರ ವರೆಗೂ ನಡೆಸಲಾಗುತ್ತದೆ.
ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಇಲಾಖಾವಾರು ಚುನಾವಣೆಗಳನ್ನು ಮೇ 27ರಿಂದ ಜೂನ್ 26ರ ವರೆಗೂ ನಡೆಸಲಿದ್ದು, ಕೇಂದ್ರ ಸಂಘದ ಅಧ್ಯಕ್ಷರು ಮತ್ತು ಖಜಾಂಚಿ ಸ್ಥಾನದ ಚುನಾವಣೆಗಳನ್ನು ಜುಲೈ 17 ರಿಂದ ಆಗಸ್ಟ್ 8ರ ವರೆಗೂ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಕಳೆದ ಫೆ.28ರ ವರೆಗೆ ಸದಸ್ಯತ್ವವನ್ನು ನೊಂದಾಯಿಸಿರುವ ಎಲ್ಲ ಸರ್ಕಾರಿ ನೌಕರರು ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.ಶಾಖಾ ಸಂಘಗಳ ಚುನಾವಣಾ ವೇಳಾಪಟ್ಟಿಯನ್ನು ಆಯಾ ಶಾಖೆಗಳ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.