ಶ್ರೀಲಂಕಾ: ಐಸಿಸ್ ಅಡಗುತಾಣದ ಮೇಲೆ ದಾಳಿ; 6ಮಕ್ಕಳು, ಆತ್ಮಹತ್ಯಾ ಬಾಂಬರ್ ಸೇರಿ 15 ಬಲಿ

ಕೊಲಂಬೋ: ಶ್ರೀಲಂಕಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಐಸಿಸ್ ಅಡಗುತಾಣದ ಮೇಲೆ ಶ್ರೀಲಂಕಾ ಭದ್ರತಾ ಪಡೆ ಮತ್ತು ಶಂಕಿತ ಉಗ್ರರ ನಡುವೆ ದಿನವಿಡೀ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ ಹದಿನೈದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯಿಂದ ಕಾಲ್ ಮುನೈ ನಗರದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರ ವಿರುದ್ಧ ಶ್ರೀಲಂಕಾ ಭದ್ರತಾ ಪಡೆಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಮೂವರು ಆತ್ಮಹತ್ಯಾ ಬಾಂಬರ್ ತಮ್ಮನ್ನು ತಾವು ಸ್ಫೋಟಿಸಿಕೊಂಡ ಪರಿಣಾಮ ಮೂವರು ಮಹಿಳೆಯರು, ಆರು ಮಕ್ಕಳು ಬಲಿಯಾಗಿದ್ದರು.

ಅಲ್ಲದೇ ಉಳಿದ ಮೂವರು ಕೂಡಾ ಆತ್ಮಹತ್ಯಾ ಬಾಂಬರ್ ಗಳು ಎಂದು ಶಂಕಿಸಲಾಗಿದ್ದು, ಮನೆಯ ಹೊರಭಾಗದಲ್ಲಿ ಮೂವರ ಶವಪತ್ತೆಯಾಗಿರುವುದಾಗಿ ಪೊಲೀಸರ ಪ್ರಕಟಣೆ ತಿಳಿಸಿದೆ. ಉಳಿದವರು ಮಿಲಿಟರಿ ಶೂಟೌಟ್ ಗೆ ಬಲಿಯಾಗಿರುವುದಾಗಿ ವರದಿ ತಿಳಿಸಿದೆ.

ದಾಳಿ ವೇಳೆ ಮನೆಯಲ್ಲಿ  ಅಪಾರ ಪ್ರಮಾನದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಶಂಕಿತ ಉಗ್ರರು ನ್ಯಾಶನಲ್ ತೌಹೀದ್ ಜಮಾತ್(ಎನ್ ಟಿಜೆ) ನ ಸದಸ್ಯರೆಂದು ಶಂಕಿಸಲಾಗಿದೆ. ಕಳೆದ ಭಾನುವಾರ ನಡೆದ ಸರಣಿ ಸ್ಫೋಟದ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಇದರಲ್ಲಿ ಸ್ಥಳೀಯ ಎನ್ ಟಿಜೆ ಕೈಜೋಡಿಸಿರುವುದಾಗಿ ಲಂಕಾ ಮಿಲಿಟರಿ ತಿಳಿಸಿತ್ತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ