ಕಲಬುರಗಿ, ಏ .27-ಪ್ರಿಯಾಂಕ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಂಚೋಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರವನ್ನು ದತ್ತು ಸ್ವೀಕರಿಸುವುದಾಗಿ ಪ್ರಿಯಾಂಕ ಖರ್ಗೆ ಹೇಳಿದ್ದರು. ದತ್ತು ಸ್ವೀಕರಿಸುವುದಕ್ಕಿಂತ ಇದೇ ಕ್ಷೇತ್ರದಲ್ಲಿ ನನ್ನ ಪುತ್ರನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಹೇಳಿದರು.
ನನ್ನ ಪುತ್ರನಿಗೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಉಪಚುನಾವಣೆಗೆ ಟಿಕೆಟ್ ನೀಡಿರುವುದಕ್ಕೆ ನನ್ನ ಕುಟುಂಬದಲ್ಲಾಗಲಿ, ಕ್ಷೇತ್ರದಲ್ಲಾಗಲಿ ಯಾರದೇ ಅಸಮಾಧಾನವಿಲ್ಲ. ನನ್ನ ಪುತ್ರನನ್ನು ಕಣಕ್ಕಿಳಿಸಬೇಕೆಂಬ ಆಸೆ ನನಗಿರಲಿಲ್ಲ. ಕ್ಷೇತ್ರದ ಜನರ ಒತ್ತಾಸೆ ಹಾಗೂ ಹೈಕಮಾಂಡ್ ಒತ್ತಾಸೆ ಮೇರೆಗೆ ಕಣಕ್ಕಿಳಿಸಿದ್ದೇನೆ ಎಂದು ಹೇಳಿದರು.
ನನ್ನ ಸೋದರ ರಾಮಚಂದ್ರ ಜಾಧವ್ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಸ್ಪರ್ಧಿಸುತ್ತಿಲ್ಲ. ಹಾಗಾಗಿ ನನ್ನ ಮಗನಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸುನೀಲ್ ವಲ್ಯಾಪುರೆ ಉತ್ತಮ ವ್ಯಕ್ತಿ ಅವರು ನಮ್ಮೊಂದಿಗಿದ್ದಾರೆ, ನಮಗೆ ಬೆಂಬಲ ಕೊಡುತ್ತಾರೆ ಎಂದು ಹೇಳಿದರು.
ಉಮೇಶ್ ಜಾಧವ್ ಅವರ ಸೋದರ ರಾಮಚಂದ್ರ ಜಾಧವ್ ಮಾತನಾಡಿ, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಸ್ಪರ್ಧೆ ಮಾಡುತ್ತಿಲ್ಲ. ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.