ಬೆಂಗಳೂರು, ಏ.27- ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಪಾಲಿಕೆ ಸಭೆಯಲ್ಲಿ ಇಂದು ಭರವಸೆ ನೀಡಿದರು.
ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಬ್ದುಲ್ ವಾಜಿದ್ ಅವರು, ನಿನ್ನೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ಯಾರೋ ರಾಷ್ಟ್ರಧ್ವಜ ಹಾಕಿದ್ದರು. ಯಾರು ಹೀಗೆ ಮಾಡಿದ್ದಾರೋ ತಿಳಿಯದು ಇದು ತಪ್ಪು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬಾರದು. ಅದು ಯಾರೇ ಆಗಿರಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನಿನ್ನೆ ಕಸದ ತೊಟ್ಟಿಯಲ್ಲಿದ್ದ ರಾಷ್ಟ್ರಧ್ವಜವನ್ನು ನೋಡಿ ನಾನೇ ಮೇಯರ್ ಅವರಿಗೆ ತಂದು ಕೊಟ್ಟೆ ಎಂದು ಹೇಳಿದರು.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರು ಯಾರೇ ಆಗಿರಲಿ, ಎಂಥವರೇ ಆಗಿರಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ, ಸಿಬ್ಬಂದಿಯಾಗಿರಲಿ, ಅಧಿಕಾರಿಗಳೇ ಆಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ ಈ ಬಗ್ಗೆ ಸೂಕ್ತ ತನಿಖೆ ಮಾಡಿ ಯಾರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.