ಬಿಜೆಪಿಯಲ್ಲಿ ಸ್ಪೋಟಗೊಂಡ ಬಿನ್ನಮತ

ಬೆಂಗಳೂರು,ಏ.27- ಮುಂದಿನ ತಿಂಗಳು ನಡೆಯಲಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತಿದ್ದಂತೆ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಮತ ಸ್ಫೋಟಗೊಂಡಿದೆ.

ಅದರಲ್ಲೂ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಸಂಬಂಧಿಯೂ ಆಗಿರುವ ಎಸ್.ಐ.ಚಿಕ್ಕನಗೌಡರ್ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ಸ್ಥಳೀಯ ಮುಖಂಡರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರಕಾಶ್ ಗೌಡ ಪಾಟೀಲ್ ಎಂಬುವರು ಟ್ವಿಟರ್‍ನಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದಾರೆ.

ಕುಂದಗೋಳದಲ್ಲಿ ವಾಸ್ತವಾಂಶ ಏನಿದೆ ಎಂಬುದನ್ನು ಅರಿಯದೆ ರಾಜ್ಯ ನಾಯಕರು ಏಕಾಏಕಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಹಲವು ದಿನಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವುದು ಎಂ.ಆರ್.ಪಾಟೀಲ್. ಅವರಿಗೆ ಟಿಕೆಟ್ ನೀಡುವ ಬದಲಿಗೆ ಚಿಕ್ಕನಗೌಡರ್ ಅವರನ್ನು ಅಭ್ಯರ್ಥಿಯೆಂದು ಘೋಷಿಸಿರುವುದು ಯಾವ ನ್ಯಾಯ ಎಂದು ಪ್ರಕಾಶ್ ಗೌಡ ಪಾಟೀಲ್ ಪ್ರಶ್ನಿಸಿದ್ದಾರೆ.

ಎಸ್.ಐ.ಚಿಕ್ಕನಗೌಡರು ಕೂಡ ಒಳ್ಳೆಯವರೇ. ಆದರೆ ಅವರಿಗಿಂತಲೂ ಎಂ.ಆರ್.ಪಾಟೀಲ್ ಸಂಭಾವಿತರು. ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರೆ ಗೆಲುವಿನ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ರಾಜ್ಯಾಧ್ಯಕ್ಷರ ಸಂಬಂಧಿಕರು ಎಂಬ ಒಂದೇ ಕಾರಣಕ್ಕಾಗಿ ಮಣೆ ಹಾಕಿರುವುದು ಸರಿಯಲ್ಲ.

ಈಗಲೂ ಕಾಲ ಮಿಂಚಿಲ್ಲ. ಕ್ಷೇತ್ರದಲ್ಲಿ ಯಾರ ಯಾರ ಬಲ ಎಷ್ಟಿದೆ ಎಂಬುದನ್ನು ಸಮೀಕ್ಷೆ ಮಾಡಿಯೇ ಟಿಕೆಟ್ ಘೋಷಣೆ ಮಾಡಿದರೆ ಒಳ್ಳೆಯದು.ಇಲ್ಲದಿದ್ದರೆ ಚಿಕ್ಕನಗೌಡರ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಸೋಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಈ ಬೆಳವಣಿಗೆ ರಾಜ್ಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.ನಿನ್ನೆಯಷ್ಟೇ ಚಿಕ್ಕನಗೌಡರ್ ಅವರ ಹೆಸರನ್ನು ಅಂತಿಮಗೊಳಿಸಿ ಬಿಜೆಪಿ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು.

ಬಗೆಹರಿಯದ ಬಿಕ್ಕಟ್ಟು:
ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡಿರುವ ಪಕ್ಷದ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿದೆ.

ಮಾಜಿ ಸಚಿವ ಸುನೀಲ್ ವಲ್ಯಾಪುರೆ ನಡೆ ಏನೆಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ.ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿರುವುದರಿಂದ ಬಿಜೆಪಿಯಲ್ಲಿ ಆತಂಕ ಹೆಚ್ಚಾಗಿದೆ.

ಮೇಲ್ಮನೆಗೆ ನಿಮ್ಮನ್ನು ಆಯ್ಕೆ ಮಾಡುತ್ತೇನೆ ಎಂದು ವಲ್ಯಾಪುರೆಗೆ ರಾಜ್ಯಾಧ್ಯಕ್ಷರು ಭರವಸೆ ನೀಡಿದ್ದರೂ ಭಿನ್ನಮತ ಮಾತ್ರ ಈವರೆಗೂ ಶಮನವಾಗಿಲ್ಲ.

ಸುನೀಲ್ ವಲ್ಯಾಪುರೆ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಉಮೇಶ್ ಜಾಧವ್ ಹೇಳಿದ್ದರೂ ಈಗಾಗಲೇ ಅವರನ್ನು ಕಾಂಗ್ರೆಸ್‍ಗೆ ಸೆಳೆಯಲು ಸ್ಥಳೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ.

ವಲ್ಯಾಪುರೆ ಎಲ್ಲಿಯೂ ಹೋಗುವುದಿಲ್ಲ. ಬಿಜೆಪಿಯಲ್ಲೇ ಇರುತ್ತಾರೆ ಎಂದು ಪಕ್ಷದ ನಾಯಕರು ನಂಬಿದ್ದಾರೆ.ಆದರೆ ಅವರ ನಡೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೆ ಒಂದೇ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ.ಹಲವು ವರ್ಷಗಳಿಂದ ನಾವು ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿದ್ದೇವೆ. ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡುತ್ತಾ ಹೋದರೆ ನಮ್ಮಂಥವರು ಹಾಗೂ ಕಾರ್ಯಕರ್ತರು ಏನು ಮಾಡಬೇಕೆಂದು ಸುನೀಲ್ ವಲ್ಯಾಪುರೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನನ್ನ ಸಹೋದರ ರಾಮಚಂದ್ರ ಜಾಧವ್ ಆರೋಗ್ಯ ಸರಿ ಇಲ್ಲದ ಕಾರಣ ಪುತ್ರ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಲಾಗಿದೆ.ಸೋಮವಾರ ಅವರು ನಾಮಪತ್ರ ಸಲ್ಲಿಸುತ್ತಾರೆಂದು ಜಾಧವ್ ಹೇಳಿದ್ದಾರೆ.

ಆದರೆ ಎರಡೂ ಕ್ಷೇತ್ರಗಳಲ್ಲಿ ಉಂಟಾಗಿರುವ ಭಿನ್ನಮತವನ್ನು ಪಕ್ಷದ ನಾಯಕರು ಹೇಗೆ ಪರಿಹರಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ