ಬೆಂಗಳೂರು, ಏ.27-ನಗರೋತ್ಥಾನ ಯೋಜನೆಯಡಿ ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪ್ರತಿ ವಾರ್ಡ್ಗೆ 4 ಕೋಟಿ ರೂ.ನೀಡಲು ಸರ್ಕಾರಕ್ಕೆ ಅವಕಾಶ ಕೋರುವಂತೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮನವಿ ಮಾಡಿದರು.
ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಈ ಹಣದಲ್ಲಿ ಕೈಗೊಳ್ಳಲು ಅನುಕೂಲವಾಗಲಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿರುವ 8 ಸಾವಿರ ಹಣದಲ್ಲಿ 1 ಸಾವಿರ ಕೋಟಿ ಬಳಸಲು ಸರ್ಕಾರಕ್ಕೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.
4ಜಿ ಎಕ್ಸಮ್ಷನ್ ಪಡೆಯಲು ಕೂಡ ಪ್ರಸ್ತಾವನೆ ಸಲ್ಲಿಸಬೇಕೆಂದು ಅಬ್ದುಲ್ ವಾಜೀದ್ ಹೇಳಿದಾಗ, ಹೆಬ್ಬಾಳ ಶಾಸಕ ಭೆರತಿ ಸುರೇಶ್ ಕೂಡ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸದಸ್ಯರು ಕಮೀಷನ್ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಪದ್ಮನಾಭರೆಡ್ಡಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಅಪರ ಆಯುಕ್ತ ಭರತ್ಲಾಲ್ ಮೀನಾ ಮಾತನಾಡಿ, ಚುನಾವಣಾ ಆಯೋಗ ತುರ್ತು ಪರಿಸ್ಥಿತಿಗಳಲ್ಲಿ ಟೆಂಡರ್ ಕರೆಯಲು ಅನುಮತಿ ನೀಡಿದೆ. ಆದರೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ. ಇನ್ನು 23 ದಿನಗಳು ಮಾತ್ರ ಬಾಕಿ ಇರುವುದರಿಂದ ಇಂತಹ ಯಾವುದೇ ಪ್ರಸ್ತಾಪವನ್ನು ಸಲ್ಲಿಸುವುದು ಬೇಡ ಎಂದಾಗ, ವಿರೋಧ ಪಕ್ಷದ ಸದಸ್ಯರು ಟೇಬಲ್ ಕುಟ್ಟಿ ಸ್ವಾಗತಿಸಿದರು.