ಬೆಂಗಳೂರು, ಏ.27- ವ್ಹೀಲಿಂಗ್ ಹಾಗೂ ಡ್ರ್ಯಾಗ್ ರೇಸ್ ನಡೆಸುವ ಯುವಕರು, ಒಂದು ಕ್ಷಣ ತಮ್ಮ ಪೋಷಕರ ಬಗ್ಗೆ ಆಲೋಚಿಸಿ ನಿಮ್ಮ ತಾಯಿಯನ್ನು ರಸ್ತೆ ಪಕ್ಕದಲ್ಲಿ ಕೂರಿಸಿ ಆಕೆಯ ಮುಂದೆ ಒಂದು ಬಾರಿ ವ್ಹೀಲಿಂಗ್ ಮಾಡಿ ನೋಡಿ, ಆಕೆಯ ಹೃದಯ ಕಿತ್ತು ಬರುತ್ತದೆ. ನಿಮ್ಮ ಶೋಕಿಗಾಗಿ ತಂದೆ-ತಾಯಿಯನ್ನು ಬೀದಿಗೆ ತಂದು ನಿಲ್ಲಿಸುವುದು ಸರಿಯೇ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.
ಕೆ.ಆರ್.ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ವ್ಹೀಲಿಂಗ್ ಮಾಡುವವರ ಮನಃಪರಿವರ್ತನಾ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಕಳೆದ ವರ್ಷ 685 ಮಂದಿ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ 150 ಜನ ವ್ಹೀಲಿಂಗ್‍ನಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ಯುವಕರು ವ್ಹೀಲಿಂಗ್ ಮೂಲಕ ಹೀರೋಗಳಾಗಲು ಪ್ರಯತ್ನಿಸುತ್ತಿದ್ದರೆ, ಅವರು ಪೊಲೀಸ್, ಸೇನೆ, ಎನ್‍ಸಿಸಿಗೆ ಸೇರಿ ನಿಜವಾದ ಹೀರೊಗಳಾಗಲಿ. ಒಂದು ವೇಳೆ ದ್ವಿಚಕ್ರ ವಾಹನ ಚಾಲನೆಯಲ್ಲೆ ಹೆಸರುಗಳಿಸಬೇಕೆಂಬ ಹಂಬಲವಿದ್ದರೆ, ವೃತ್ತಿಪರವಾದ ರೇಸಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಿ, ಅಲ್ಲಿ ಸುರಕ್ಷತೆ ಇರುತ್ತದೆ ಎಂದು ತಿಳಿಸಿದರು.
ನಾವು ಈ ಹಿಂದೆ ಡ್ರಗ್ಸ್ ಹಾವಳಿ ವಿರುದ್ಧ ನಡೆಸಿದ್ದ ಚಳವಳಿಯ ಮಾದರಿಯಲ್ಲೆ ಈ ವ್ಹೀಲಿಂಗ್ ವಿರುದ್ಧವು ಚಳವಳಿ ನಡೆಸಬೇಕಿದೆ ಎಂದು ಆಬ್ದುಲ್ ಅಹದ್ ಹೇಳಿದರು.
ಜಮೀಯತ್ ಉಲೇಮಾ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷ ಮೌಲಾನ ಮುಫ್ತಿ ಮುಹಮ್ಮದ್ ಹುಸೇನ್ ಮಾತನಾಡಿ, ವ್ಹೀಲಿಂಗ್, ಡ್ರ್ಯಾಗ್ ರೇಸ್ ಹಾಗೂ ನಶೆಯ ಚಟದಿಂದಾಗಿ ನಮ್ಮ ಸಮಾಜದ ಯುವಕರು ಹಾಳಾಗುತ್ತಿದ್ದಾರೆ. ತಮ್ಮ ತಪ್ಪುಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವಕರಲ್ಲಿ ಜಾಗೃತಿ ಮೂಡಿಸಲು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅತ್ತುತ್ತಮವಾದದ್ದು ಎಂದರು.
ಯುವಕರು ತಮ್ಮ ಪೋಷಕರ ಮೇಲೆ ಒತ್ತಡ ಹೇರಿ 2-3 ಲಕ್ಷ ರೂ.ಮೌಲ್ಯದ ಬೈಕ್‍ಗಳನ್ನು ಖರೀದಿಸುತ್ತಾರೆ. ಅದರಲ್ಲಿ ವ್ಹೀಲಿಂಗ್ ಮಾಡುತ್ತಾರೆ.ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮಾಜವು ಎಲ್ಲರಿಗೂ ಮಾದರಿಯಾಗಿತ್ತು. ಆದರೆ, ದುರಾದೃಷ್ಟವಶಾತ್ ಇವತ್ತು ಅಪರಾಧಗಳು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಕಂಡು ಬರುತ್ತಿದ್ದಾರೆ.ನಾವು ನಮ್ಮ ಧಾರ್ಮಿಕ ಶಿಕ್ಷಣದಿಂದ ವಿಮುಖರಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಯೋಗರತ್ನ ಪ್ರಶಸ್ತಿ ಪುರಸ್ಕøತ ಗಂಗಾಧರಪ್ಪ ಮಾತನಾಡಿ, ನನ್ನ ಆತ್ಮೀಯ ಸ್ನೇಹಿತನ ಮಗ ವ್ಹೀಲಿಂಗ್ ಮಾಡಲು ಹೋಗಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಒಂದು ವರ್ಷದಿಂದ ಆತ ಕೋಮಾದಲ್ಲಿದ್ದಾನೆ. ನನ್ನ ಸ್ನೇಹಿತ ಹಾಗೂ ಆತನ ಕುಟುಂಬ ಇವತ್ತು ಸುಮಾರು 45 ಲಕ್ಷ ರೂ.ಗಳನ್ನು ಖರ್ಚು ಮಾಡಿದರೂ, ತನ್ನ ಮಗನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ ಎಂದರು.
ಮಕ್ಕಳ ಸಹಾಯವಾಣಿಯ ಹಿರಿಯ ಸಮಾಲೋಚಕಿ ಪ್ರೀತಿ ಬಾಳಿಗಾ ಇದೇ ವೇಳೆ ಯುವಕರೊಂದಿಗೆ ಸಂವಾದ ನಡೆಸಿದರು.
ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಜಯರಾಜ್, ವೈಟ್‍ಫೀಲ್ಡ್ ಉಪ ವಿಭಾಗದ ಎಸಿಪಿ ರವಿಶಂಕರ್, ಸಿಲಿಕಾನ್ ಸಿಟಿ ಕಾಲೇಜಿನ ಪ್ರಾಂಶುಪಾಲ ಜ್ಞಾನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.