ಚನ್ನಪಟ್ಟಣ, ಏ.27- ಎರಡು ವರ್ಷಗಳ ಹಿಂದೆ ನಗರದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಮೊದಲನೆ ಆರೋಪಿ ನದ್ದು ಅಲಿಯಾಸ್ ನದೀಮ್ (33) ಈತನಿಗೆ ಒಂದು ಲಕ್ಷ ರೂ. ದಂಡ ಹಾಗೂ 14 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದರೆ, ಮತ್ತೊಬ್ಬ ಆರೋಪಿ ಮುಜಾಮಿಲ್ಗೆ(30) 5 ಸಾವಿರ ರೂ. ದಂಡ ಹಾಗೂ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ. ಮೂರನೆ ಆರೋಪಿ ಸದ್ದಾಂ ಮೇಲೆ ಯಾವುದೇ ರೀತಿಯ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಆತನನ್ನು ಖುಲಾಸೆಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 21ರಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಾ ಶಾಲೆಯ ಬಳಿ ಠಾಣೆ ಕಲಾನಗರದ ಜಬಿವುಲ್ಲಾ ಎಂಬುವರ ಮಗ ಪೈಸಲ್ ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿ ನದ್ದು ಅಲಿಯಾಸ್ ಸದೀಮ್ ಚಾಕು ಹಾಕಿ ಕೊಲೆ ಮಾಡಿದ್ದ.
ನದ್ದು ಮಾಡಿದ ಕೊಲೆಗೆ ಮುಜಾಮಿಲ್ ಸಹಕರಿಸಿದ್ದ. ಈ ಪ್ರಕರಣದ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಅಂದಿನ ಪೊಲೀಸ್ ಉಪವಿಭಾಗಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ನಾರಾಯಣಸ್ವಾಮಿ ಪ್ರಕರಣದ ತನಿಖೆ ಹೊತ್ತಿದ್ದರು.
ಪ್ರಕರಣದ ಬಗ್ಗೆ ಜಿಲ್ಲೆಯ ಮೂರನೆ ಹೆಚ್ಚುವರಿ ನ್ಯಾಯಾಲಯದಲ್ಲಿ ಎರಡು ವರ್ಷಗಳ ಕಾಲ ನಿರಂತರವಾಗಿ ವಾದ-ವಿವಾದ ನಡೆದು ಪ್ರಧಾನ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಅವರು ಆರೋಪಿಗಳ ಮೇಲೆ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ದಂಡ ಹಾಗೂ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದ್ದಾರೆ.
ಸರ್ಕಾರಿ ನ್ಯಾಯವಾದಿ ರಘು ಕೊಲೆಯಾದ ಪೈಸಲ್ ಪರ ವಾದ ಮಂಡಿಸಿದ್ದರು. ಪೆÇಲೀಸ್ ಉಪವಿಭಾಗಾಧಿಕಾರಿ ಟಿ.ಮಲ್ಲೇಶ್ ಮಾರ್ಗದರ್ಶನದಲ್ಲಿ ನಗರವೃತ್ತ ನಿರೀಕ್ಷಕ ಸತೀಶ್ ಹಾಗೂ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಹೇಮಂತ್ಕುಮಾರ್ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.