ಬೆಂಗಳೂರು, ಏ .27-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ.
ಪ್ರಸಕ್ತ ಲೋಕಸಭೆ ಚುನಾವಣೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ನಾಳೆ ಸಂಜೆ ಖಾಸಗಿ ಹೊಟೇಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ವಿಚಾರದ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುತ್ತದೆ. ಮತ್ತೆ ಆಪರೇಷನ್ ಕಮಲದ ಪ್ರಯತ್ನ ನಡೆಸುವ ಸಾಧ್ಯತೆಗಳು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಶಾಸಕರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದು, ಮೈತ್ರಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರಗಳು, ರಮೇಶ್ ಜಾರಕಿ ಹೊಳಿ ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿರುವುದು, ಅದರಿಂದ ಉಂಟಾಗುವ ಸಮಸ್ಯೆಗಳು, ಪರಿಹಾರ ಮಾರ್ಗಗಳ ಬಗ್ಗೆಯೂ ಸಮಾಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಆಮಿಷಕ್ಕೆ ಬಲಿಯಾಗಬಾರದು, ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದು, ಸರ್ಕಾರವನ್ನು ಮುನ್ನಡೆಸಲು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡುವ ಸಾಧ್ಯತೆಗಳಿವೆ.
ಇದುವರೆಗೂ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಯಾವ ಪ್ರಯತ್ನವೂ ಫಲ ನೀಡಿಲ್ಲ. ಪಕ್ಷದ ಶಾಸಕರು ಒಗ್ಗಟ್ಟಿನಿಂದ ಇದ್ದಿದ್ದರಿಂದ ಬಿಜೆಪಿ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ಇನ್ನು ಮುಂದೆಯೂ ಅದೇ ರೀತಿ ಒಗ್ಗಟ್ಟಿನಿಂದ ಇರುವಂತೆ ಕೋರಲಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಏನೇ ಆದರೂ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡುವ ಸಾಧ್ಯತೆ ಗಳಿವೆ.