ತುಮಕೂರು: ಮೈತ್ರಿ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ನಾಮಪತ್ರ ವಾಪಸ್ ಪಡೆಯಲು ತಲಾ 3.5 ಕೋಟಿ ಹಣ ಪಡೆದಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಗ್ಗೆ ಮಾತುಕತೆ ನಡೆಸಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.
ಹೌದು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಬೆಂಬಲಿಗ ದರ್ಶನ್, ಕಾಂಗ್ರೆಸ್ ಕಾರ್ಯಕರ್ತನೊಂದಿಗೆ ಸಂಭಾಷಣೆ ನಡೆಸಿದ ಆಡಿಯೋ ಈಗ ಲೀಕ್ ಆಗಿದೆ. ಈ ಸಂಭಾಷಣೆಯಲ್ಲಿ ರಾಜಣ್ಣ ಮತ್ತು ಮುದ್ದಹನುಮೇಗೌಡ ತಲಾ 3.5 ಕೋಟಿ ರೂ. ಪಡೆದಿದ್ದಾರೆ. ಆದರೂ ಪ್ರಚಾರಕ್ಕೆ ಬಾರದೆ ಮೋಸ ಮಾಡಿದ್ದಾರೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ದೇವೇಗೌಡರು ಗೆದ್ದರೆ ಡಿಸಿಎಂ ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಸಚಿವ ರೇವಣ್ಣ ಡಿಸಿಎಂ ಆಗುತ್ತಾರೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿಯಲ್ಲಿ ಇರಲಿದ್ದಾರೆ ಎಂದೆಲ್ಲ ದರ್ಶನ್ ಮಾತನಾಡಿದ್ದಾರೆ. ಜೊತೆಗೆ ದೇವೇಗೌಡರು ಸೋತರೆ ರಾಜಣ್ಣ ಮತ್ತು ಮುದ್ದಹನುಮೇಗೌಡರು ಪಕ್ಷದಿಂದ ಅಮಾನತು ಆಗ್ತಾರೆ ಎಂದು ಸಂಭಾಷಣೆ ನಡೆಸಿದ್ದಾರೆ.
ಈ ಸಂಭಾಷಣೆಯ ಆಡಿಯೋ ಈಗ ಬಹಿರಂಗವಾಗಿದ್ದು, ಮತ್ತೊಂದು ವಿವಾದಕ್ಕೆ ದರ್ಶನ್ ಸಿಲುಕಿಕೊಂಡಿದ್ದಾರೆ. ಇವರು ಗುರುವಾರವಷ್ಟೆ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿ ಜಾರಕಿಹೊಳಿ ಬೆಂಬಲಿಗರಿಂದ ಥಳಿಸಿಕೊಂಡಿದ್ದು, ಇದೀಗ ಇನ್ನೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.