![ramesh-jarkiholi](http://kannada.vartamitra.com/wp-content/uploads/2019/04/ramesh-jarkiholi-572x381.jpg)
ಬೆಂಗಳೂರು,ಏ.26-ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಳ್ಳಲು ಬೆಂಬಲಿಗರು ಹಿಂದೇಟು ಹಾಕಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಕೊಂಚ ನಿರಾಳ ತಂದಿದೆ.
ಲೋಕಸಭೆ ಚುನಾವಣೆ ದಿನ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ ತಾವೊಂದಷ್ಟು ಜನ ಖುದ್ದಾಗಿ ರಾಜೀನಾಮೆ ನೀಡುವುದಾಗಿ ಬಾಂಬ್ ಸ್ಫೋಟಿಸಿದ್ದರು.
ಅದು ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಕಾರಣವಾಗಿತ್ತು. ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಒಂದಷ್ಟು ಚಟುವಟಿಕೆಗಳಲ್ಲಿ ನಿರತರಾಗಿದ್ದರು.
ಕಾಂಗ್ರೆಸ್ನ ಒಂದಷ್ಟು ಅತೃಪ್ತ ಶಾಸಕರಿಗೆ ದೂರವಾಣಿ ಕರೆ ಮಾಡಿದ್ದು, ಅದರ ಮಾಹಿತಿ ಸೋರಿಕೆಯಾಗುತ್ತಿದ್ದಂತೆ ಆಖಾಡಕ್ಕಿಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಕರೆ ಮಾಡಿದ್ದ ಎಲ್ಲಾ ಶಾಸಕರ ಜತೆ ಮಾತುಕತೆ ನಡೆಸಿದ್ದಲ್ಲದೆ, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ರಮೇಶ್ ಜಾರಕಿಹೊಳಿ ಅವರದ್ದು ವೈಯಕ್ತಿಕ ಸಮಸ್ಯೆ, ಅವರ ಮಾತಿಗೆ ಬೆಲೆ ಕೊಟ್ಟು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ, ಇದರಿಂದ ರಾಜಕೀಯ ಭವಿಷ್ಯವೇ ಅತಂತ್ರಗೊಳ್ಳುತ್ತದೆ ಎಂಬ ಹಿತವಚನ ಹೇಳಿದ್ದರು.
ರಾಜಕೀಯ ಪಾಳಯದಲ್ಲಿ ಎಲ್ಲರೂ ಲೋಕಸಭೆ ಚುನಾವಣೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಅದರ ನಂತರ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಆವರೆಗೂ ತಾಳ್ಮೆಯಿಂದ ಇರದೆ ತಕ್ಷಣವೇ ತಮ್ಮ ಜತೆ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಡ ಹೇರಿದ್ದರು ಎನ್ನಲಾಗಿದೆ.
ರಾಜೀನಾಮೆ ನೀಡಿದ ನಂತರ ಮುಂದಿನ ಭವಿಷ್ಯ ಏನು ಎಂಬ ಬಗ್ಗೆ ಯಾರ ಬಳಿಯೂ ಸ್ಪಷ್ಟ ಉತ್ತರ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿನ ಸಿಟ್ಟಿನಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್ ಜಾಧವ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ನಾಯಕರು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈಗ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವುದರಲ್ಲೂ ಗೊಂದಲಗಳಿವೆ. ಉಮೇಶ್ ಜಾಧವ್ ಒಂದು ವೇಳೆ ಲೋಕಸಭೆಯ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡರೆ ಅವರ ರಾಜಕೀಯ ಭವಿಷ್ಯವೇ ತ್ರಿಶಂಕು ಸ್ಥಿತಿಗೆ ತಲುಪಲಿದೆ.
ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಕಲಬುರ್ಗಿ ಜಿಲ್ಲೆಯ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ್, ಎ.ಬಿ.ಮಾಲಕರೆಡ್ಡಿ ಅವರು ಅಲ್ಲಿನ ಸಂಸ್ಕøತಿಗೆ ಹೊಂದಿಕೊಳ್ಳಲಾಗದೆ ಉಸಿರುಕಟ್ಟಿದ ವಾತಾವರಣದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ನೀವೂ ರಾಜೀನಾಮೆ ನೀಡಿ ಹೋದರೆ ಬೆಳಗಾವಿ ಜಿಲ್ಲಾ ನಾಯಕರ ಪರಿಸ್ಥಿತಿಯೂ ಅದೇ ರೀತಿ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಸಿಎಂ, ಡಿಸಿಎಂ ಹಾಗೂ ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಎಲ್ಲಕ್ಕಿಂತಲೂ ಪ್ರಮುಖವಾಗಿ ರಮೇಶ್ ಜಾರಕಿಹೊಳಿ ಅವರು ಆರಂಭದಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಜಿದ್ದಾಜಿದ್ದಿನಿಂದ ಬಂಡಾಯದ ಬಾವುಟ ಹಿಡಿದಿದ್ದರು.
ಒಂದು ಹಂತದವರೆಗೂ ಜತೆಯಲ್ಲಿದ್ದ ಸಹೋದರ ಸತೀಶ್ ಜಾರಕಿಹೊಳಿ ಸಚಿವ ಸ್ಥಾನ ಸಿಗುತ್ತಿದ್ದಂತೆ ಪಕ್ಷ ನಿಷ್ಠೆಯ ನೆಪದಲ್ಲಿ ರಮೇಶ್ ಜಾರಕಿಹೊಳಿ ಅವರ ಕೈ ಬಿಟ್ಟರು.
ಹಾಗಾಗೇ ಒಂಟಿಯಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿಯ ಸಂಪರ್ಕಕ್ಕೆ ಹೋಗಿ ಸರ್ಕಾರ ಪತನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆ ಸಂದರ್ಭದಲ್ಲಿ ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ಸುಧಾಕರ್, ನಾರಾಯಣಗೌಡ ಸೇರಿದಂತೆ ಕೆಲ ಶಾಸಕರು ಅವರ ಜತೆ ಜಾಥ್ ನೀಡಿದ್ದರು.
ಸೀಮಂತ್ ಪಾಟೀಲ್, ಅಜಲಿ ನಿಬಾಳ್ಕರ್ ಅವರೂ ತಮ್ಮ ಜತೆಯಲ್ಲೇ ಬರುತ್ತಾರೆ ಎಂದು ರಮೇಶ್ ಜಾರಕಿಹೊಳಿ ಬಲವಾಗಿ ನಂಬಿದ್ದರು. ಆದರೆ, ನಿನ್ನೆಯ ಬೆಳವಣಿಗೆಯನ್ನು ನೋಡಿದರೆ ಪರಿಸ್ಥಿತಿ ತಿರುವುಮರುವಾಗಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಸೀಮಂತ್ಪಾಟೀಲ್ ತಾವು ಕಾಂಗ್ರೆಸ್ ನಿಷ್ಠರೆಂದು ಘೋಷಣೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಅವರ ಸಂಘದಿಂದ ಅಂತರ ಕಾಯ್ದುಕೊಂಡಿದ್ದಾರೆ.
ನಿನ್ನೆ ಇಡೀ ದಿನ ರಮೇಶ್ ಜಾರಕಿಹೊಳಿ ಹರಸಾಹಸಪಟ್ಟು ಅತೃಪ್ತ ಶಾಸಕರನ್ನು ಕ್ರೂಢೀಕರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಏಕಾಂಗಿಯಾಗಿರುವ ಅವರು ಇಂದು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.