ರಾಹುಲ್​ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಚುನಾವಣಾ ಪ್ರಚಾರಕ್ಕೆ ತೆರಳದೇ ವಾಪಸ್

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್​ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಪಾಟ್ನಾಕ್ಕೆ ತೆರಳದೇ ದೆಹಲಿಗೆ ವಾಪಸ್ ಆಗಿದ್ದಾರೆ.

ರಾಹುಲ್​ ಗಾಂಧಿ ಇಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಪಟ್ನಾಗೆ ತೆರಳುತ್ತಿದ್ದರು. ಬೆಳಗ್ಗೆ ದೆಹಲಿಯಿಂದ ಅವರು ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯಾಣವನ್ನು ಮೊಟಕುಗೊಳಿಸಿ ವಾಪಸ್ ಆಗಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಟ್ವೀಟ್​ ಮಾಡಿರುವ ರಾಹುಲ್, ನಾವು ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಇಂದು ಬಿಹಾರದ ಸಮಸ್ತಿಪುರ, ಒಡಿಶಾದ ಬಾಲಾಸೋರ್​ ಮತ್ತು ಮಹಾರಾಷ್ಟ್ರದ ಸಂಗಮನೇರ್​ನಲ್ಲಿ ಆಯೋಜಿಸಿರುವ ಸಭೆಗಳಲ್ಲಿ ಪಾಲ್ಗೊಳ್ಳುವುದು ಸ್ವಲ್ಪ ತಡವಾಗಲಿದೆ. ಜನರಿಗೆ ನನ್ನಿಂದ ತೊಂದರೆಯಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಏ. 26ರಂದು ಉತ್ತರ ಕನ್ನಡ ಜಿಲ್ಲೆಗೆ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಲು ದೆಹಲಿಯಿಂದ ಹುಬ್ಬಳ್ಳಿಗೆ ‘ವಿಟಿ ಎವಿಎಚ್’ ವಿಶೇಷ ವಿಮಾನದ ಮೂಲಕ ರಾಹುಲ್ ಗಾಂಧಿ ಪ್ರಯಾಣಿಸಿದ್ದರು. ಆ ಸಂದರ್ಭದಲ್ಲಿ 8 ಸಾವಿರ ಅಡಿಯಷ್ಟು ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ಏಕಾಏಕಿ ಕೆಳಗೆ ಕುಸಿದು ಅಲುಗಾಡಿತ್ತಲ್ಲದೇ, ಎಡಭಾಗಕ್ಕೆ ವಾಲತೊಡಗಿತ್ತು. ಆಟೋಪೈಲಟ್ ವಿಧಾನ ಕೆಲಸ ಮಾಡದಿರುವುದನ್ನು ಗಮನಿಸಿದ್ದ ಪೈಲಟ್, ವಿಮಾನದ ಸಮತೋಲನ ಕಾಪಾಡಲು ಪ್ರಯತ್ನಿಸಿದ್ದರು. ನಂತರ ಎರಡು ಬಾರಿ ಇಲ್ಲಿನ ನಿಲ್ದಾಣದಲ್ಲಿ ವಿಮಾನ ಇಳಿಸಲು ಪ್ರಯತ್ನಿಸಿದ್ದರು. ಮೂರನೇ ಬಾರಿ ಶಬ್ದ ಮಾಡುತ್ತ, ತುಸು ಅಲುಗಾಡುತ್ತ ವಿಮಾನ ಭೂಸ್ಪರ್ಶ ಮಾಡಿತ್ತು. ವಿಮಾನದ ತಾಂತ್ರಿಕ ದೋಷದಿಂದ ಈ ಸಮಸ್ಯೆಯುಂತಾಗಿತ್ತು. ಈಗ ಮತ್ತೆ ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಯುಂಟಾಗಿದೆ.

Rahul Gandhi’s flight to Patna experiences ‘engine trouble’, returns to Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ