ಬೆಂಗಳೂರು,ಏ.26- ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ ಮಂಡಿಸಿದ್ದ 13 ಸಾವಿರ ಕೋಟಿ ರೂ.ಗಳ ಅವ್ಯವಹಾರವನ್ನು ಸರ್ಕಾರ 9 ಸಾವಿರ ಕೋಟಿಗೆ ಇಳಿಸಿರುವ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಬಜೆಟ್ ಮಂಡನೆಗೆ ಕಾರಣರಾದ ಮೇಯರ್ ಗಂಗಾಂಬಿಕೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದ್ದಾರೆ.
ಪಾಲಿಕೆಯಲ್ಲಿ ಅವೈಜ್ಞಾನಿಕವಾಗಿ 13 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದ ಸಂದರ್ಭದಲ್ಲೇ ನಾನು ಹಾಗೂ ಬಿಜೆಪಿ ಪಕ್ಷದ ಸದಸ್ಯರು ಬಜೆಟ್ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ವಾಪಸ್ ಕಳುಹಿಸಿ ವಾಸ್ತವಿಕ ಬಜೆಟ್ ಮಂಡಿಸುವಂತೆ ಒತ್ತಾಯಿಸಿದ್ದೆವು.
ಆದರೆ ಮೇಯರ್ ಗಂಗಾಂಬಿಕೆ ಹಾಗೂ ಬಜೆಟ್ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ನಮ್ಮ ಸಲಹೆಯನ್ನು ಮೀರಿ ಅವೈಜ್ಞಾನಿಕ ಬಜೆಟ್ ಮಂಡನೆ ಮಾಡಿದ್ದರು.
ಬಜೆಟ್ ಮಂಡನೆ ನಂತರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು 9 ಸಾವಿರ ಕೋಟಿಗಿಂತ ಹೆಚ್ಚಿನ ಮುಂಗಡಪತ್ರಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಪಾಲಿಕೆ ಆರ್ಥಿಕ ದಿವಾಳಿ ಅಂಚಿಗೆ ತಲುಪಲಿದೆ. ಹೀಗಾಗಿ ವಾಸ್ತವಿಕ ಬಜೆಟ್ ಮಂಡನೆಗೆ ಸಲಹೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಆಯುಕ್ತರ ಸಲಹೆ ಮೇರೆಗೆ ಬಿಬಿಎಂಪಿ ಮಂಡಿಸಿದ 13 ಸಾವಿರ ಕೋಟಿ ರೂ.ಗಳ ಬಿಬಿಎಂಪಿ ಬಜೆಟ್ನ್ನು ತಿರಸ್ಕರಿಸಿ 9 ಸಾವಿರ ಕೋಟಿ ರೂ.ಗಳ ಆಯವ್ಯಯ ನಿಗದಪಡಿಸಿ ವಾಪಸ್ ಕಳುಹಿಸಿದೆ.
ಸರ್ಕಾರ ಬಿಬಿಎಂಪಿ ಬಜೆಟ್ನ್ನು ಈ ರೀತಿ ವಾಪಸ್ ಕಳುಹಿಸಿರುವುದು ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲು. ಸರ್ಕಾರದ ಈ ನಿರ್ಧಾರದಿಂದ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತಕ್ಕೆ ತೀವ್ರ ಮುಖಭಂಗವಾಗಿದೆ.
ಸರ್ಕಾರ 9 ಸಾವಿರ ಕೋಟಿ ರೂ.ಗಳಿಗೆ ಆಯವ್ಯಯ ನಿಗದಿಪಡಿಸಿ ವಾಪಸ್ ಕಳುಹಿಸಿರುವುದರಿಂದ ಮತ್ತೆ 9 ಸಾವಿರ ಕೋಟಿ ರೂ.ಗಳ ಬಜೆಟ್ಗೆ ಕೌನ್ಸಿಲ್ ಸಭೆಯ ಒಪ್ಪಿಗೆ ಅನಿವಾರ್ಯ.
ಹೀಗಾಗಿ 9 ಸಾವಿರ ಕೋಟಿ ರೂ.ಗಳ ಬಿಬಿಎಂಪಿ ಬಜೆಟ್ಗೆ ಸರ್ಕಾರದ ಅನುಮೋದನೆ ದೊರೆಯಲು ಮತ್ತೆ ಎರಡು ತಿಂಗಳು ಬೇಕಾಗುತ್ತದೆ. ಇದರಿಂದ ನಗರದ ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೇಯರ್ ಗಂಗಾಂಬಿಕೆ ಅವರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ನಗರದ ನಾಗರಿಕರ ಕ್ಷಮೆಯಾಚಿಸಿ ನೈತಿಕ ಹೊಣೆ ಹೊತ್ತು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪದ್ಮನಾಭ ರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.