ಬೆಂಗಳೂರು, ಏ.26- ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶವ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ನಿರ್ಧರಿಸುವುದಾಗಿ ಸಿಐಡಿಯ ಉನ್ನತ ಮೂಲಗಳು ತಿಳಿಸಿವೆ.
ಮಧುಪತ್ತಾರ್ ಸಾವಿನ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಎಸ್ಪಿ ಡಾ.ಶರಣಪ್ಪ ಅವರ ನೇತೃತ್ವದ ತಂಡ ರಾಯಚೂರಿನಲ್ಲಿ ತನಿಖೆ ಕೈಗೊಂಡಿದೆ.
ಆರೋಪಿ ಸುದರ್ಶನ್ ಯಾದವ್ ಮತ್ತು ಸಾವನ್ನಪ್ಪಿರುವ ಮಧುಪತ್ತಾರ್ ಅವರ ಮನೆಗಳಿಗೆ ತೆರಳಿ ಸಾಕಷ್ಟು ಮಾಹಿತಿಗಳನ್ನು ತಂಡ ಕಲೆ ಹಾಕಿದೆ.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡದಿಂದಲೂ ಸಾಕಷ್ಟು ಸಹಕಾರ ಸಿಕ್ಕಿದೆ. ಹೀಗಾಗಿ ತನಿಖೆ ಚುರುಕುಗೊಂಡಿದೆ.
ಮಧುಪತ್ತಾರ್ ಅವರ ಶವ ಪರೀಕ್ಷೆಯ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ತನಿಖಾ ತಂಡದ ಕೈ ಸೇರಿಲ್ಲ. ಹೀಗಾಗಿ ಸಾವು ಯಾವ ಸ್ವರೂಪದ್ದು ಎಂದು ನಿರ್ಧಾರಕ್ಕೆ ಬರಲಾಗಿಲ್ಲ. ವರದಿ ಕೈ ಸೇರಿದ ಬಳಿಕವಷ್ಟೇ ಅದು ಕೊಲೆಯೋ, ಆತ್ಮಹತ್ಯೆಯೋ ಎಂದು ನಿರ್ಧರಿಸಲು ಸಾಧ್ಯ.
ಪ್ರಸ್ತುತ ಸನ್ನಿವೇಶದಲ್ಲಿ ಸಾವಿನ ಪ್ರಕರಣ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ತನಿಖೆ ನಿರ್ಧಿಷ್ಟ ಹಂತ ತಲುಪುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಯಚೂರಿನ ಇಂಜನಿಯರಿಂಗ್ ಕಾಲೇಜ್ವೊಂದರಲ್ಲಿ ಓದುತ್ತಿದ್ದ ಮಧುಪತ್ತಾರ್ ಏ.13ರಂದು ನಾಪತ್ತೆಯಾಗಿದ್ದರು. ಏ.16ರಂದು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಮೊಣಕಾಲು ಮಡಚಿದ್ದು, ವಿದ್ಯಾರ್ಥಿನಿಯ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಇದ್ದವೆಂದು ಪೋಷಕರು ಆರೋಪಿಸಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರು ನೀಡಿದ್ದರು.ದೂರು ಆಧರಿಸಿ ತನಿಖೆ ಕೈಗೊಂಡ ಸ್ಥಳೀಯ ಪೊಲೀಸರು ಸುದರ್ಶನ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.