ಸರ್ಕಾರದ ವಿವಿಧ ಇಲಾಖೆಗಳ ವಿಚಾರಣೆ-ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸಲು ಸೂಚನೆ

ಬೆಂಗಳೂರು,ಏ.25- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವಿಚಾರಣೆಗಳನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ಇಲಾಖೆ ವಿಚಾರಣೆಗಳನ್ನು ಇತ್ಯರ್ಥಪಡಿಸಲು ವಿಳಂಬವಾಗುವುದನ್ನು ತಪ್ಪಿಸಲು, ಲೋಪದೋಷಗಳನ್ನು ನಿವಾರಿಸಲು ಸಂಬಂಧಪಟ್ಟ ಪ್ರಾಧಿಕಾರಿಗಳಿಗೆ ಸರ್ಕಾರದಿಂದ 16 ವಿವಿಧ ಮರು ಸೂಚನೆಗಳನ್ನು ನೀಡಲಾಗಿದೆ.

ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮ, 12ರಡಿ ಲಘು ದಂಡನೆಯನ್ನು ವಿಧಿಸಬಹುದಾದ ಪ್ರಕರಣಗಳಲ್ಲಿ ಪ್ರಾರಂಭದಲ್ಲೇ ವಿಚಾರಣೆ ದಾಖಲೆಗಳನ್ನು ಪರಿಶೀಲಿಸಬೇಕು.

ನಿಯಮ 11ರಡಿ ಕಠಿಣ ದಂಡನೆಯನ್ನು ವಿಧಿಸಬಹುದಾಗಿದ್ದು, ಯಾಂತ್ರಿಕವಾಗಿ ವಿಚಾರಣೆ ಪ್ರಾರಂಭಿಸುವಾಗ ಆರಂಭದಲ್ಲೇ ದಾಖಲೆಗಳನ್ನು ಪರಿಶೀಲಿಸಿದ್ದಲ್ಲಿ ಬಹುತೇಕ ಇಲಾಖೆ ವಿಚಾರಣೆಗಳು ಶೀಘ್ರವಾಗಿ ಇತ್ಯಥಗೊಳಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೀಡಿರುವ ಸೂಚನೆಯಲ್ಲಿ ತಿಳಿಸಿದ್ದಾರೆ.

ನಿಯಮ 12ರಡಿ ಲಘು ದಂಡನೆಗಳನ್ನು ವಿಧಿಸುವಂತಹ ಪ್ರಕರಣಗಳಷ್ಟೇ ಅಲ್ಲದೆ ನಿಯಮ 11ರಡಿ ಬರುವಂತಹ ಪ್ರಕರಣಗಳಲ್ಲಿಯೂ ಸಹ ಸರ್ಕಾರದ ಸಚಿವಾಲಯದ ಆಡಳಿತ ಇಲಾಖೆಯೊಂದಿಗೆ ಅನಗತ್ಯ ಪತ್ರ ವ್ಯವಹಾರವನ್ನು ತಪ್ಪಿಸಬೇಕು. ಪ್ರಾಧಿಕಾರಿಗಳ ಅಂದರೆ ಆಯಾಯ ಇಲಾಖೆಯ ಮುಖ್ಯಸ್ಥರ ಮಟ್ಟದಲ್ಲಿಯೇ ಶಿಸ್ತು ನಡಾವಳಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಕಠಿಣ ದಂಡನೆ ವಿಧಿಸಬೇಕಾದ ಪ್ರಕರಣಗಳಲ್ಲಿ ಅಧಿಕಾರ ಹೊಂದಿದ ಶಿಸ್ತು ಪ್ರಾಧಿಕಾರಕ್ಕೆ ಇಲಾಖೆ ವಿಚಾರಣೆಯ ದಾಖಲೆಗಳನ್ನು ಕಳುಹಿಸಲು ಸೂಚಿಸಲಾಗಿದೆ.

ಒಂದು ಸರ್ಕಾರಿ ಇಲಾಖೆಯಿಂದ ಮತ್ತೊಂದು ಇಲಾಖೆಗೆ ಪ್ರತಿ ನಿಯೋಜನೆ ಮೇಲೆ ನೇಮಕ ಮಾಡಿದ ಪ್ರಾಧಿಕಾರಿಯು ನಿಯಮಗಳಲ್ಲಿನ ಅವಕಾಶಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕು. ತಹಸೀಲ್ದಾರ್ ಗ್ರೇಡ್ 2 ಹೊರತುಪಡಿಸಿ ಸಮೂಹ ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರೇ ತಮ್ಮ ಮಟ್ಟದಲ್ಲಿಯೇ ಶಿಸ್ತು ನಡವಳಿಕೆಗಳನ್ನು ಪ್ರಾರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕಾಗುತ್ತದೆ.

ಒಂದು ವೇಳೆ ಕಠಿಣ ದಂಡನೆ ವಿಧಿಸಬೇಕಾದ ಸಂದರ್ಭ ಇದ್ದರೆ ವಿಚಾರಣಾ ದಾಖಲೆಗಳನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕು.ಅನಧಿಕೃತವಾಗಿ ಗೈರು ಹಾಜರಾದ ನೌಕರರ ಪ್ರಕರಣಗಳಲ್ಲಿ ವಿಳಂಬ ಮಾಡದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹದಳ, ನ್ಯಾಯಾಲಯಗಳಲ್ಲಿ ಶಿಸ್ತು ನಡವಳಿಕೆಗಳನ್ನು ನಡೆಸಲು ಉದ್ದೇಶಿಸಿದ್ದಲ್ಲಿ ದೋಷಾರೋಪಣ ಪಟ್ಟಿ ತಯಾರಿಸುವ ಹಂತದಲ್ಲೇ ಅಗತ್ಯವಿರುವ ದಾಖಲೆಗಳನ್ನು ಸಂಬಂಧಿಸಿದ ತನಿಖಾ ಸಂಸ್ಥೆಗಳಿಂದ ಪಡೆಯಬೇಕೆಂದು ಸೂಚಿಸಲಾಗಿದೆ.

ಒಂದು ತಿಂಗಳ ಒಳಗಾಗಿ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ಏಕಕಾಲದಲ್ಲಿ ನೇಮಿಸಬೇಕು. ಆರೋಪಿತ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುವ ಸ್ಥಳದಲ್ಲೇ ಇರಬೇಕು ಹಾಗೂ ವಿಚಾರಣಾಧಿಕಾರಿಯನ್ನು ನೇಮಕ ಮಾಡಬೇಕು.

ಒಬ್ಬರಿಗಿಂತ ಹೆಚ್ಚು ಸರ್ಕಾರಿ ನೌಕರರು ಆರೋಪಿತರಾಗಿದ್ದರೂ ಒಬ್ಬರೇ ವಿಚಾರಣಾಧಿಕಾರಿಯನ್ನು ನೇಮಿಸಬೇಕು.ಕಾಲಮಿತಿಯಲ್ಲಿ ದಾಖಲೆಗಳನ್ನು ಒದಗಿಸಲು ವಿಚಾರಣಾಧಿಕಾರಿಯು ಅಧಿಕಾರಿಗಳಿಗೆ ನಿಗದಿಪಡಿಸಬೇಕು ಜೊತೆಗೆ ವಿಳಂಬಕ್ಕೆ ಹೊಣೆಗಾರರಾಗುತ್ತಾರೆ ಎಂಬ ಸೂಚನೆ ನೀಡಬೇಕು.

ಸಾಕ್ಷ್ಯ ನೀಡಲು ಹಾಜರಾಗದ ನೌಕರರ ವಿರುದ್ಧ ಸಂಬಂಧಪಟ್ಟ ಶಿಸ್ತು ಪ್ರಾಧಿಕಾರ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ 16 ಮರುಸೂಚನೆಗಳನ್ನು ನೀಡಿದ್ದು, ಎಲ್ಲ ನೇಮಕಾತಿ ಪ್ರಾಧಿಕಾರಗಳು, ಶಿಸ್ತು ಪ್ರಾಧಿಕಾರಗಳು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಲು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ