ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂಬ ಹೇಳಿಕೆಗಳು ಕೇಳಿಬಂದಿತ್ತು. ಆದರೆ ಈ ಸುದ್ದಿಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್, ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುತ್ತಿಲ್ಲ. ಬೇರೊಬ್ಬ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿಯವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಲಿದೆ. ಹಾಗಾಗಿ ಈಬಾರಿ ವಾರಣಾಸಿ ಲೋಕಸಭಾ ಅಖಾಡ ಪ್ರಧಾನಿ ಮೋದಿ ವರ್ಸಸ್ ಪ್ರಿಯಾಂಕಾ ಗಾಂಧಿ ಎಂಬಂತೆ ಹೈವೋಲ್ಟೆಜ್ ಕ್ಷೇತ್ರವಾಗಿ ಪರಿಣಮಿಸಲಿದೆ ಎನ್ನಲಾಗಿತ್ತು.
ಆದರೀಗ ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಪ್ರಿಯಾಂಕಾ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದೆ.
ವಾರಣಾಸಿಯಿಂದ ಮೋದಿ ವಿರುದ್ಧ ಕಾಂಗ್ರೆಸ್ ಅಜಯ್ ರಾಯ್ ಗೆ ಟಿಕೆಟ್ ನೀಡಲಿದೆ. 2014ರಲ್ಲಿಯೂ ಅಜಯ್ ರಾಯ್ ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಿದ್ದರು. 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಜಯ್ ರಾಯ್ ಗೆ ಈ ಬಾರಿಯೂ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ಅವರೇ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದೆ.
Priyanka won’t contest from Varanasi against Modi