ನವದೆಹಲಿ: ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 26ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಎರಡನೇ ಬಾರಿಗೆ ಈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನಾಮಪತ್ರ ಸಲ್ಲಿಕೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಸಾಥ್ ನೀಡಲಿದ್ಧಾರೆ.
ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಲು ಬಿಜೆಪಿ ಮುಂದಾಗಿದೆ. ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರ‍್ಯಾಲಿ ಶುರುವಾಗಲಿದೆ. ಅಲ್ಲಿಂದ ಶುರುವಾಗಲಿರುವ ರೋಡ್ ಶೋ ರ‍್ಯಾಲಿ ದಶಾಶ್ವಮೇದ್ ಘಾಟ್ ಬಳಿ ಮುಕ್ತಾಯವಾಗಲಿದೆ ಎಂದು ಬಿಜೆಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ರೋಡ್ ಶೋ ಮುಗಿದ ಕೂಡಲೇ ಪ್ರಧಾನಿ ಮೋದಿ ಅವರು ದಶಾಶ್ವಮೇದ್‌ನಲ್ಲಿ ಗಂಗಾ ಪೂಜೆ ನೆರವೇರಿಸಲಿದ್ದಾರೆ. ಅದಾದ ಬಳಿಕ ಸ್ಥಳೀಯ ಮುಖಂಡರ ಜತೆಗೆ ಮೋದಿಯವರು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೇ ಸದ್ಯದ ಪರಿಸ್ಥತಿ ಕ್ಷೇತ್ರದಲ್ಲಿ ಹೇಗಿದೆ ಎಂಬುದರ ಸುತ್ತ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಪ್ರಧಾನಿಯವರ ಈ ಎರಡು ದಿನಗಳ ಕಾರ್ಯಕ್ರಮ ಪಟ್ಟಿ ಈಗಾಗಲೇ ಬಿಡುಗಡೆ ಮಾಡಿದೆ. ‘ನಾಮಪತ್ರ ಸಲ್ಲಿಸುವ ದಿನ(ಶುಕ್ರವಾರ) ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಬಳಿಕ ಸುಮಾರು 11 ಗಂಟೆ ವೇಳೆಗೆ ನಗರದ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಧಾನಿ ಮೋದಿಯವರ ಸ್ಪರ್ಧೆ ಕಾರಣಕ್ಕೆ ಉತ್ತರ ಭಾರತದಲ್ಲಿ ಲೋಕ ಚುನಾವಣಾ ಅಬ್ಬರ ಜೋರಾಗುತ್ತಿದೆ. ದೇಶದ ಪುರಾತನ ನಗರ ಎಂದೇ ಹೆಸರು ವಾಸಿಯಾಗಿರುವ ವಾರಣಾಸಿಯಿಂದಲೇ ಪ್ರಧಾನಿ ಮೋದಿ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೆ ಎನ್ಡಿಎ ಮೈತ್ರಿಕೂಟದ ನಾಯಕರು ಸಾಕ್ಷಿಯಾಗಲಿದ್ಧಾರೆ.