ಬೆಂಗಳೂರು, ಏ.25-ನಗರಕ್ಕೆ ಬಂದ ಕಾಂಗ್ರೆಸ್ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಕುಮಾರಕೃಪ ಅತಿಥಿಗೃಹದ ಹಿಂಭಾಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಕುಳಿತು ಕೆಲ ಕಾಲ ರಮೇಶ್ ಜಾರಕಿಹೊಳಿ ಕಾರ್ಯಾಚರಣೆ ನಡೆಸಿದರು. ಆದರೆ, ಅವರ ಮನೆ ಮುಂದೆ ಮಾಧ್ಯಮಗಳ ಕ್ಯಾಮೆರಾಗಳು ಇದ್ದದ್ದರಿಂದ ಅತೃಪ್ತ ಶಾಸಕರು ರಮೇಶ್ ಜಾರಕಿಹೊಳಿ ಅವರ ಭೇಟಿಗೆ ಬರಲು ಹಿಂದೇಟು ಹಾಕಿದರು ಎನ್ನಲಾಗಿದೆ.
ಹೀಗಾಗಿ ರಮೇಶ್ ಜಾರಕಿಹೊಳಿ ಬೆಳಗ್ಗೆ 11.30ಕ್ಕೆ ಮನೆಯಿಂದ ದಿಢೀರ್ ತೆರಳಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರು ಭದ್ರತಾ ಸಿಬ್ಬಂದಿಯನ್ನೂ ಜತೆಗೆ ಕರೆದುಕೊಂಡು ಹೋಗಿಲ್ಲ.
ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಸದಾಶಿವನಗರದ ಗಣೇಶ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕುಂಬಳಗೂಡು ಬಳಿ ಇರುವ ಖಾಸಗಿ ರೆಸಾರ್ಟ್ಗೆ ತೆರಳಿದ್ದಾರೆ ಎನ್ನಲಾಗಿದ್ದು, ಅಲ್ಲಿಯೇ ಕುಳಿತು ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಾರೆ ಎಂದು ಹೇಳಲಾಗಿದೆ.