ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ ಆದ್ರೆ ನಿಮಗೆ ಮತ ಕೊಡಲ್ಲ: ಮೋದಿಗೆ ದೀದಿ ಟಾಂಗ್

ಕೋಲ್ಕತ್ತಾ: ನಾವು ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ. ಆದ್ರೆ ನಿಮಗೆ ಮತ ಮಾತ್ರ ನೀಡಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಡೆಸಿದ ರಾಜಕಿಯೇತರ ಸಂದರ್ಶನದ ವೇಳೆ ಮೋದಿ ಅವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ನಾವು ಅತಿಥಿಗಳಿಗೆ ರಸಗುಲ್ಲಾ, ಉಡುಗೊರೆಗಳನ್ನು ನೀಡಿ ಸ್ವಾಗತಿಸುತ್ತೇವೆ. ಆದ್ರೆ ಮತ ಮಾತ್ರ ನೀಡಲ್ಲ ಎಂದು ಪರೋಕ್ಷವಾಗಿ ಮೋದಿ ಅವರಿಗೆ ಟಾಂಗ್ ಕೊಟ್ಟರು.

ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನದಲ್ಲಿ ಮೋದಿ ರಾಜಕೀಯ ಹೊರತು ಪಡಿಸಿ ಮಮತಾ ಬ್ಯಾನರ್ಜಿ ಜೊತೆ ಇರುವ ಉತ್ತಮ ಸಂಬಂಧವನ್ನು ತಿಳಿಸಿದ್ದರು. “ಪ್ರತಿ ವರ್ಷವೂ ದಿದಿ ವೈಯಕ್ತಿಕವಾಗಿ ಆಯ್ಕೆ ಮಾಡಿ ನನಗೆ ಕುರ್ತಾ ಉಡುಗೊರೆ ಜೊತೆ ಸಿಹಿ ತಿನಿಸುಗಳು ಇಷ್ಟ ಎಂದು ಪ್ರತಿ ವರ್ಷವೂ ಬೆಂಗಾಲಿ ತಿಂಡಿಯನ್ನು ಕಳುಹಿಸಿಕೊಡುತ್ತಾರೆ”. ಬಾಂಗ್ಲಾದೇಶದ ಪ್ರಧಾನಿ ಅವರು ಢಾಕಾದಿಂದ ಆಯ್ದ ಕೆಲವು ತಿಂಡಿಗಳನ್ನು ನನಗೆ ಕಳುಹಿಸುತ್ತಿರುವ ವಿಚಾರ ತಿಳಿದು ಮಮತಾ ಬ್ಯಾನರ್ಜಿ ಸಹ ನನಗೆ ತಿಂಡಿಗಳನ್ನು ಕಳುಹಿಸಲು ಮುಂದಾದರು ಎಂದು ವಿವರವನ್ನು ಹಂಚಿಕೊಂಡಿದ್ದರು.

ಮೋದಿ ಮತ್ತು ಮಮತಾ ಅವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಸ್ಪರ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು “ಸ್ಪೀಡ್ ಬ್ರೇಕರ್ ದೀದಿ” ಎಂದು ವ್ಯಂಗ್ಯವಾಡಿದ್ದಕ್ಕೆ ಮಮತಾ “ಎಕ್ಸ್ಪಿರಿ ಬಾಬು” ಎಂದು ಹೇಳಿ ತಿರುಗೇಟು ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ