ಸಿಎಂ ಯೋಗಿ, ಕೇಜ್ರಿವಾಲ್, ಮೋಹನ್ ಭಾಗವತ್ ಜೈಶ್ ಉಗ್ರರ ನೆಕ್ಸ್ಟ್ ಟಾರ್ಗೆಟ್!

ನವದೆಹಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಕೊಲ್ಲಲು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಟಾರ್ಗೆಟ್ ಮಾಡಿದೆ.

ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ ತಿಳಿಸಿದ್ದು, ಶಾಮ್ಲಿ ಮತ್ತು ಉತ್ತರಾಖಂಡದ ರೂರ್ಕಿಯ ರೈಲು ನಿಲ್ದಾಣಗಳಲ್ಲಿ ಜೈಶ್‌-ಎ-ಮೊಹಮದ್‌ ಉಗ್ರರು ಬಿಡುಗಡೆಗೊಳಿಸಿದ್ದಾರೆ ಎನ್ನಲಾದ ಎರಡು ಪ್ರತ್ಯೇಕ ಪತ್ರಗಳು ದೊರೆತಿದ್ದು, ಇದರಲ್ಲಿ ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳು, ರೈಲ್ವೆ ನಿಲ್ದಾಣಗಳಲ್ಲಿ ಸ್ಫೋಟಗಳನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಹಿರಿಯ ಅಧಿಕಾರಿಯ ಪ್ರಕಾರ, ಎರಡು ಪತ್ರಗಳಲ್ಲಿರುವ ವಿಷಯಗಳಲ್ಲಿ ಹೋಲಿಕೆ ಇದ್ದು, ಉತ್ತರ ಪ್ರದೇಶದ ವಾರಣಾಸಿಯಲ್ಲಿನ ವಿಶ್ವನಾಥ ದೇವಾಲಯ ಮತ್ತು ಅಯೋಧ್ಯೆಯಲ್ಲಿ ‘ರಾಮ ಜನ್ಮಭೂಮಿ’, ಉತ್ತರಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿನ ವಿವಿಧ ದೇವಸ್ಥಾನಗಳ ಸ್ಫೋಟಗಳ ಜೊತೆಗೆ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುವ ಬಗ್ಗೆ ಪತ್ರಗಳು ತಿಳಿಸಿವೆ ಎಂದಿದ್ದಾರೆ.

ಕಳೆದ ಒಂದು ವಾರದಲ್ಲಿ ಇದು ಎರಡನೇ ಘಟನೆಯಾಗಿದ್ದು, ಏಪ್ರಿಲ್ 19 ರಂದು ಪಂಜಾಬ್, ರಾಜಸ್ಥಾನ ಮತ್ತು ಉತ್ತರಾಖಂಡದ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆಯಲಾಗಿತ್ತು.  ಜೈಶ್ ಸಂಘಟನೆಯ ಪ್ರದೇಶ ಕಮಾಂಡರ್ ಮನ್ಸೂರ್ ಅಹ್ಮದ್ ಬರೆದಿದ್ದ ಪತ್ರ ಹಿಂದಿ ಭಾಷೆಯಲ್ಲಿತ್ತು ಎನ್ನಲಾಗಿದೆ.

ಇದಾದ ಬಳಿಕ ಉತ್ತರ ರೈಲ್ವೆಯ ಫಿರೋಜ್ಪುರ್ ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕ ವಿವೇಕ್ ಕುಮಾರ್ ಅವರನ್ನು ಸಂಭೋಧಿಸಿ ಮೇ 13ರಂದು ಮತ್ತೊಂದು ಪತ್ರ ಬರೆಯಲಾಗಿದ್ದು, ಫಿರೋಜ್ಪುರ್, ಜಲಂಧರ್, ಫರಿದ್ಕೋಟ್, ಅಮೃತಸರ್ ಮತ್ತು ಬರ್ನಾಲಾ ರೈಲ್ವೇ ನಿಲ್ದಾಣಗಳಲ್ಲಿ ಬಾಂಬುಗಳನ್ನು ಸ್ಫೋಟಿಸುವ ಮೂಲಕ ಜೈಶ್ ಸಂಘಟನೆಯ ಉಗ್ರಗಾಮಿಗಳ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ  ಪತ್ರದಲ್ಲಿ ಹೇಳಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ