ಸರ್ಕಾರ ರಚಿಸುವ ಬಿಜೆಪಿಯ ಯೋಜನೆ ಫಲಿಸುವುದಿಲ್ಲ-ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಏ.25-ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ನಾಯಕರು ಮತ್ತು ಯಡಿಯೂರಪ್ಪನವರು ಬಹಳಷ್ಟು ಬಾರಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಗಡುವು ನೀಡಿದ್ದರು. ಈ ಬಾರಿಯೂ ಆ ತರಹದ ಇನ್ನೊಂದು ಗಡುವು ನೀಡಿದ್ದಾರೆ. ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಪ್ರಮಾಣಿಕತೆ ಮತ್ತು ದಕ್ಷ ಆಡಳಿತ ನೀಡುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯವರು ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಅನುಸರಿಸುತ್ತಿರುವ ನಡೆಗಳೇನು ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗಿನಿಂದಲೂ ಏನೆಲ್ಲಾ ಬೆಳವಣಿಗೆಗಳು ಆಗಿವೆ ಎಂಬುದು ಜನರಿಗೆ ಗೊತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲೇ ಗಂಭೀರ ಚರ್ಚೆಯಾಗಿದೆ.

ವಿಧಾನಸಭೆ ಅಧ್ಯಕ್ಷರು ಮತ್ತು ಹೈಕೋರ್ಟ್‍ನ ನ್ಯಾಯಮೂರ್ತಿಗಳನ್ನು ಬುಕ್ ಮಾಡಿರುವುದಾಗಿ ಹೇಳಿರುವ ಸಂಭಾಷಣೆಯ ಆಡಿಯೋ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಉಮೇಶ್ ಜಾಧವ್ ಪ್ರಕರಣದಲ್ಲಿ ನಡೆದಿರುವುದೇನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ರಮೇಶ್ ಜಾರಕಿಹೊಳಿ ಅವರಿಗೆ ಅಸಮಧಾನವಿದ್ದರೆ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಮತ್ತಿತರ ಹಿರಿಯರಿದ್ದಾರೆ. ಅವರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ. ಕಾಂಗ್ರೆಸ್‍ನ ಅತ್ಯಂತ ಹಿರಿಯ ನಾಯಕರಾಗಿರುವ ರಮೇಶ್ ಜಾರಕಿಹೊಳಿ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಪ್ರಿಯಾಂಕ್ ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ