ಟ್ರ್ಯಾಕಟರ್‍ಗೆ ಡಿಕ್ಕಿ ಹೊಡೆದ ಬಸ್-ಅಪಘಾತದಲ್ಲಿ ಇಬ್ಬರ ಸಾವು

ಬಳ್ಳಾರಿ,ಏ.25- ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಪೇಟೆ ತಾಲೂಕು ಹಾರುವನಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.

ಯರ್ರಿಸ್ವಾಮಿ(35) ಹಾಗೂ ರೇಣುಕಮ್ಮ(38) ಮೃತ ದುರ್ದೈವಿಗಳು.

ನರೇಗಾ ಕೆಲಸಕ್ಕೆ ಗೊಲ್ಲರಹಳ್ಳಿ, ಬಸವನದುರ್ಗ ಕೆರೆಗೆ ಚಿಲಕರಹಟ್ಟಿ ಗ್ರಾಮದಿಂದ ಟ್ರ್ಯಾಕ್ಟರ್‍ನಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಹಾರುವನಳ್ಳಿ ಬಳಿ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಗಾಯಾಳುಗಳನ್ನು ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಲವರ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಮರಿಯಮ್ಮನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ