ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣೆ ಮುಗಿದರೂ ಚುನಾವಣೆಯ ಕಾವು ಕಡಿಮೆಯಾದಂತೆ ಕಾಣುತ್ತಿಲ್ಲ. ಯಾಕಂದ್ರೆ ಚುನಾವಣೆ ಮುಗಿದ ನಂತರ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದಾರೆ ಅನ್ನೋ ಗುಸು ಗುಸು ಈಗ ಮಂಡ್ಯದಲ್ಲಿ ಕೇಳಿ ಬರುತ್ತಿದೆ.
ಚುನಾವಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಸಿಂಗಾಪುರ್ಗೆ ಹೋಗ್ತಾರೆ ಎಂಬ ಗಾಸಿಪ್ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗೇ ಸದ್ದು ಮಾಡಿದ್ದವು. ಈ ಗಾಸಿಪ್ಗೆಲ್ಲ ತಮ್ಮ ಪ್ರತಿಸ್ಪರ್ಧಿಗಳೇ ಕಾರಣ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಅಭಿಷೇಕ್ ಚುನಾವಣೆ ಮುಗಿದ ನಂತರ ಮಂಡ್ಯದ ಮಹಾವೀರ ಸರ್ಕಲ್ಗೆ ಬಂದು ಟೀ ಕುಡಿತೀನಿ ಅಂತಾ ಸವಾಲ್ ಹಾಕಿದ್ದರು. ಅದರಂತೆಯೇ ಚುನಾವಣೆ ಮುಗಿದ ನಂತರ ತಾವು ಹೇಳಿದಂತೆ ಮಹಾವೀರ ಸರ್ಕಲ್ನಲ್ಲಿ ಟೀ ಕುಡಿದು ನಾನು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೀನಿ ಅಂತಾ ನಿಖಿಲ್ಗೆ ಟಾಂಗ್ ಕೊಟ್ಟಿದ್ದರು
ಅಂಬಿ ಪುತ್ರ ಅಭಿ ಇಷ್ಟು ಹೇಳಿದ್ದೇ ಹೇಳಿದ್ದು. ಅಭಿಷೇಕ್ ಬೆಂಬಲಿಗರು ನಮ್ಮ ಅಂಬಿ ಅಣ್ಣನ ಮಗ ಇಲ್ಲೇ ಇದ್ದಾರೆ. ಕುಮಾರಣ್ಣನ ಪುತ್ರನೇ ಚುನಾವಣೆ ಮುಗಿಸಿ ವಿದೇಶಕ್ಕೆ ಹೋಗಿದ್ದಾರೆ ಅಂತಾ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾತನಾಡತೊಡಗಿದರು. ಇಷ್ಟೆಲ್ಲ ನಡೆದ ಮೇಲೆ ಏಕಾಏಕಿ ಮಂಡ್ಯದಲ್ಲಿ ಕಾಣಿಸಿಕೊಂಡ ನಿಖಿಲ್, ನಾನು ರಾಜ್ಯ ಬಿಟ್ಟು ಎಲ್ಲೂ ಹೋಗಿಲ್ಲ. ನನ್ನ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಹಬ್ಬಿಸೋದನ್ನ ನನ್ನ ವಿರೋಧಿಗಳು ಇನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ ನಾನು ಈ ಹಿಂದೆ ಹೇಳಿದಂತೆ ಮಂಡ್ಯದಲ್ಲೇ ಜಮೀನು ಖರೀದಿಸಿ, ಮನೆ ಕಟ್ಟಿ ವಾಸ ಮಾಡುತ್ತೇನೆ ಅಂದ್ರು.