ನವದೆಹಲಿ, ಏ.24- ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳು ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮೂರನೇ ಹಂತ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರಗಳು(ಇವಿಎಂಗಳಿ) ಮತ್ತು ವೋಟರ್ ವೆರಿಫಿಯಬಲ್ ಪೇಪರ್ ಆಡಿಟ್ ಟ್ರಯಲ್ (ಪ್ಯಾಟ್)ಗಳಲ್ಲಿ ವ್ಯಾಪಕ ದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪಕ್ಷಗಳು ಸಜ್ಜಾಗಿವೆ.
ಮತಗಳ ಎಣಿಕೆಯಲ್ಲಿ ಪಾರದರ್ಶಕತೆಯನ್ನು ದೃಢಪಡಿಸಿಕೊಳ್ಳಲು ವಿವಿ ಪ್ಯಾಟ್ ಸ್ಲಿಪ್ಗಳ(ತಾಳೆ ನೋಡುವ ಚೀಟಿಗಳು)ಲ್ಲಿ ಕನಿಷ್ಠ 50ರಷ್ಟನ್ನು ಪ್ರತಿ ತಪಾಸಣೆ ಮಾಡಬೇಕೆಂದು ಕೋರಿ ನಾವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಾರ್ಟಿ(ಟಿಡಿಪಿ) ನಾಯಕ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ), ಟಿಡಿಪಿ, ತೃಣಮೂಲ ಕಾಂಗ್ರೆಸ್(ಟಿಎಂಸಿ), ಅಮ್ ಆದ್ಮಿ ಪಾರ್ಟಿ(ಎಎಪಿ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸ್ವಾದಿ)ಸಿಪಿಐ(ಎಂ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಮತ್ತು ದ್ರಾವಿಡ ಮುನ್ನೆಟ್ರಾ ಕಳಗಂ(ಡಿಎಂಕೆ) ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಈ ನಾಯಕರು ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಇವಿಎಂಗಳು ಹ್ಯಾಕಿಂಗ್ ಒಳಗಾಗುವ ಮತ್ತು ಸುಲಭವಾಗಿ ದೋಷಕ್ಕೆ ಗುರಿಯಾಗುತ್ತವೆ. ಈ ಬಗ್ಗೆ ನಮಗೆ ಆತಂಕವಿದೆ. ನಾವು ತಂತ್ರಜ್ಞಾನಕ್ಕೆ ಬೆಂಬಲ ನೀಡುತ್ತೇವೆ.
ಆದರೆ ಇಂದಿನ ತಂತ್ರಜ್ಞಾನ ಅತ್ಯಂತ ಸೂಕ್ಷ್ಮವಾಗಿದ್ದು, ಅದನ್ನು ಸುಲಭವಾಗಿ ಬದಲಿಸಬಹುದಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಟೆಕ್ನಾಲಜಿ ಬದಲಾವಣೆ ಆಗುತ್ತಿರುತ್ತದೆ. ಜೊತೆ ತಾಂತ್ರಿಕ ತೊಂದರೆಗಳಿವೆ. ಭಾರತದ ತಂತ್ರಜ್ಞಾನ ಪ್ರಬಲವಾಗಿಲ್ಲ ಎಂದು ಚಂದ್ರಬಾಬು ನಾಯ್ಡು ಆತಂಕ ವ್ಯಕ್ತಪಡಿಸಿದರು.
ರಷ್ಯನ್ ಹ್ಯಾಕರ್ಗಳು ಸುಲಭವಾಗಿ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಈ ಕೂಡಲೇ ಎಲ್ಲ ಯಂತ್ರಗಳನ್ನು ತಪಾಸಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳು ದುರುಪಯೋಗವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಆಯೋಗ ಕೈಗೊಳ್ಳಬೇಕೆಂದು ಎನ್ಪಿ ಅಧ್ಯಕ್ಷ ಶರದ್ ಪವಾರ್, ಹಿರಿಯ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ, ಎಎಪಿ ನಾಯಕ ಸಂಜಯ್ ಸಿಂಗ್, ಟಿಎಂಸಿ ಸಂಸದ ನದಿಮುಲ್ ಹಖ್ ಮತ್ತು ಸಿಪಿಐ(ಎಂ)ನ ಮಹೇಂದ್ರ ಸಿಂಗ್ ಆಗ್ರಹಿಸಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ಅನೇಕ ಪ್ರದೇಶಗಳ ಇವಿಎಂಗಳಲ್ಲಿ ಬಿಜೆಪಿ ಪರ ಮತಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.