ನವದೆಹಲಿ, ಏ.24-ಲೈಂಗಿಕ ಕಿರುಕುಳ ಸುಳ್ಳು ಆರೋಪ ಹೊರಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜೀನಾಮೆ ನೀಡುವಂತೆ ಮಾಡಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಹೇಳಿಕೆ ನೀಡಿದ್ದ ವಕೀಲ ಉತ್ಸವ್ಸಿಂಗ್ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಮ್ಮ ವರದಿ ಸಲ್ಲಿಸಿದ್ದಾರೆ.
ಈ ಸಂಬಂಧ ನಿನ್ನೆ ಸುಪ್ರೀಂಕೋರ್ಟ್ ನೀಡಿದ್ದ ನೋಟೀಸ್ಗೆ ಪ್ರತಿಯಾಗಿ ವಕೀಲರು ಇಂದು ಪ್ರತ್ಯುತ್ತರದ ವರದಿಯನ್ನು ಸಲ್ಲಿಸಿ ತಮ್ಮ ಹೇಳಿಕೆಗಳನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ಪೀಠ ನಿನ್ನೆ ಈ ಸಂಬಂಧ ಹಿರಿಯ ವಕೀಲ ಉತ್ಸವ್ಸಿಂಗ್ ಬೈನ್ಸ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಸಂಬಂಧ ಅವರು ನೀಡಿರುವ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡುವಂತೆ ಸೂಚಿಸಿತ್ತು.
ನವದೆಹಲಿಯ ಪ್ರೆಸ್ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ವಕೀಲ ಉತ್ಸವ್ಸಿಂಗ್, ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲು ಸುಪ್ರೀಂಕೋರ್ಟ್ನ ವಜಾಗೊಂಡ ಮಹಿಳೆಗೆ 1.5 ಕೋಟಿ ರೂ. ಹಣವನ್ನೂ ಸಹ ನೀಡಲಾಗಿದೆ ಎಂದು ಹೇಳಿದ್ದರು.
ಅವರ ಈ ಎಲ್ಲ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ನಿನ್ನೆ ನೋಟೀಸ್ ಜಾರಿಗೊಳಿಸಿ ಪ್ರತ್ಯುತ್ತರ ಕೋರಿತ್ತು.
ಸಾರ್ವಜನಿಕ ಪ್ರಕರಣಗಳ ಕುರಿತು ದಾಖಲಾಗಿರುವ ಇಂತಹ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಇಂದು ಅವರ ವರದಿ ಸ್ವೀಕರಿಸಿದ್ದು, ಅದರಲ್ಲಿನ ಅಂಶಗಳನ್ನು ಪರಿಗಣಿಸಿದ ನಂತರ ಮುಂದಿನ ಕ್ರಮಕೈಗೊಳ್ಳಲಿದೆ.