3ನೇ ಹಂತ: ಶೇ.66% ಮತದಾನ; ಬಂಗಾಳ, ಒಡಿಶಾ, ಕಾಶ್ಮೀರದ ಕೆಲವೆಡೆ ಹಿಂಸಾಚಾರ; ಓರ್ವ ಬಲಿ

ನವದೆಹಲಿ: ದೇಶದ 116 ಕ್ಷೇತ್ರಗಳಲ್ಲಿ ಮಂಗಳವಾರ ಮೂರನೇ ಹಂತದ ಮತದಾನ ಬಹುತೇಕ ಯಶಸ್ವಿಯಾಗಿ ನಡೆದಿದೆ. ಮೊದಲೆರಡಕ್ಕಿಂತ ಮೂರನೇ ಹಂತದಲ್ಲಿ ಮತದಾನುದ ಪ್ರಮಾಣ ತುಸು ಕಡಿಮೆ ಇರುವ ಸಾಧ್ಯತೆ ಇದೆ. ಸರಾಸರಿ ಶೇ. 66ರಷ್ಟು ಮತದಾನ ಆಗಿರುವ ಅಂದಾಜು ಇದೆ. ನಾಳೆ ಬುಧವಾರ ಬೆಳಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಹೆಚ್ಚಿರುವ ಅನಂತನಾಗ್ ಕ್ಷೇತ್ರದ ಮೊದಲ ಹಂತದ ಮತದಾನ ಇವತ್ತು ನಡೆದಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ 15%ಗಿಂತಲೂ ಕಡಿಮೆ ಮತದಾನವಾಗಿರುವ ಅಂದಾಜು ಇದೆ. ಕೇರಳ, ಪಶ್ಚಿಮ ಬಂಗಾಳ, ಗೋವಾ, ತ್ರಿಪುರಾ ಮತ್ತು ಅಸ್ಸಾಮ್ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಒಳ್ಳೆಯ ಮತದಾನವಾಗಿದೆ.

ಏಪ್ರಿಲ್ 11ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 69.50ಯಷ್ಟು ಮತದಾರರು ವೋಟ್ ಮಾಡಿದ್ದರು. ಏಪ್ರಿಲ್ 18ರ 2ನೇ ಹಂತದ ಚುನಾವಣೆಯಲ್ಲಿ 69.44% ಮತದಾನವಾಗಿತ್ತು. ಈಗ ಮೂರನೇ ಹಂತದಲ್ಲಿ ಮತದಾನದ ಪ್ರಮಾಣ ಕುಸಿದಿದೆ.

ಮತದಾನದ ವಿವರ:

ಅಸ್ಸಾಂ: 74.05%
ಬಿಹಾರ: 54.94%
ಗೋವಾ: 69.79%
ಗುಜರಾತ್: 57.69%
ಜಮ್ಮು-ಕಾಶ್ಮೀರ: 11.22%
ಕರ್ನಾಟಕ: 60.67%
ಕೇರಳ: 68.21%
ಮಹಾರಾಷ್ಟ್ರ: 54.52%
ಒಡಿಶಾ: 56.27%
ತ್ರಿಪುರಾ: 69.64%
ಉತ್ತರ ಪ್ರದೇಶ: 55.91%
ಪಶ್ಚಿಮ ಬಂಗಾಳ: 78.69%
ಛತ್ತೀಸ್​ಗಡ: 61.38%
ದಾದ್ರ, ನಾಗರ್ ಹವೇಲಿ: 56.81%
ದಮನ್, ಡಿಯು: 64.82%

ಇನ್ನು, ಮತದಾನದ ವೇಳೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಬಲಿಗ್ರಾಂನ ಮುರ್ಶಿರಾಬಾದ್​ನಲ್ಲಿ ಕಾಂಗ್ರೆಸ್​ ಹಾಗೂ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.

ಇದಕ್ಕೂ ಮುನ್ನ ಮುರ್ಶಿರಾಬಾದ್​ನ ದೊಮ್ಕಲ್​ ನಗರಸಭೆಯಲ್ಲಿ ಮೂವರು ಅಪರಿಚಿತರು ನಾಡಾ ಬಾಂಬ್​ ಸ್ಪೋಟಿಸಿದ್ದಾರೆ. ಇದಾದ ಬಳಿಕ ರಾಣಿ ನಗರದ ಮತಗಟ್ಟೆ ಸಂಖ್ಯೆ 27, 28ರಲ್ಲಿ ಅಧಿಕಾರಿಗಳ ಸಮೀಪವೇ ದುಷ್ಕರ್ಮಿಗಳು ಬಾಂಬ್​ ಸ್ಪೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ