ಬೆಂಗಳೂರು, ಏ.23-ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲಿ ಈವರೆಗೂ ಎಂಟು ಮಂದಿ ಸಾವನ್ನಪ್ಪಿರುವ ಮಾಹಿತಿ ವಿದೇಶಾಂಗ ಸಚಿವಾಲಯದಿಂದ ಖಚಿತವಾಗಿದೆ.ಇನ್ನಷ್ಟು ಸಾವು ನೋವಗಳಾಗಿರುವ ಸಾಧ್ಯತೆಗಳಿದ್ದು, ಹಂತ ಹಂತವಾಗಿ ಮಾಹಿತಿ ರವಾನೆಯಾಗುತ್ತಿದೆ.
ಇಂದು ಬೆಳಗ್ಗೆ ಶ್ರೀಲಂಕಾ ವಿದೇಶಾಂಗ ಸಚಿವಾಲಯದ ಮಾಹಿತಿ ಆಧರಿಸಿ ಭಾರತೀಯ ರಾಯಭಾರಿ ಕಚೇರಿ ಕರ್ನಾಟಕ ಸರ್ಕಾರಕ್ಕೆ ಮೂವರ ಹೆಸರನ್ನು ರವಾನಿಸಿದ್ದು, ಅವರಲ್ಲಿ ಇಬ್ಬರು ರಾಜ್ಯದವರಿದ್ದಾರೆ.ಇನ್ನೊಬ್ಬರ ವಿಳಾಸ ತಿಳಿದು ಬಂದಿಲ್ಲ.
ಇಂದು ಬೆಳಗ್ಗಿನ ಅಧಿಕೃತ ಮಾಹಿತಿಯಂತೆ ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್ (ನಾಗರಾಜ ರೆಡ್ಡಿ), ಹನುಮಯ್ಯ ಶಿವಕುಮಾರ್ ಮತ್ತು ರೇಮುರೈ ತುಳಸೀರಾಮ್ ಈ ಮೂರು ಜನ ಸರಣಿ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ಖಚಿತಪಡಿಸಲಾಗಿದೆ.ನಾಗರಾಜ ರೆಡ್ಡಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಆತ್ಮಿಯರಾಗಿದ್ದಾರೆ.
ನಿನ್ನೆ ರಾಜ್ಯದ ಮುಖ್ಯಕಾರ್ಯದರ್ಶಿಯವರ ಕಚೇರಿಗೆ ತಲುಪಿಸಲಾದ ಮಾಹಿತಿ ಪ್ರಕಾರ ಲಕ್ಷ್ಮಿನಾರಾಯಣ, ನಾರಾಯಣಚಂದ್ರಶೇಖರ್, ಕಾಚನಹಳ್ಳಿ ಗೋವಿಂದಪ್ಪ ಹನುಮಂತರಾಯಪ್ಪ, ಮಯಿಮಪ್ಪ ರಂಗಪ್ಪ, ರಮೇಶ್ಗೌಡ ಎಂಬುವರು ಮೃತಪಟ್ಟಿರುವುದು ಖಚಿತವಾಗಿತ್ತು. ಅದರಲ್ಲಿ ನಾರಾಯಣಚಂದ್ರಶೇಖರ್ ಅವರು ಮಾತ್ರ ಎಲ್ಲಿಯವರು ಎಂಬುದು ಖಚಿತವಾಗಿರಲಿಲ್ಲ. ಕರ್ನಾಟಕದಲ್ಲಿ ಅವರ ಸಂಬಂಧಿಕರು, ಸ್ನೇಹಿತರು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ನಾರಾಯಣ್ಚಂದ್ರಶೇಖರ್ ವಿಳಾಸ ಪತ್ತೆಯಾಗಿರಲಿಲ್ಲ.
ಉಳಿದಂತೆ ಲಕ್ಷ್ಮೀನಾರಾಯಣ ಅವರ ಪಾಸ್ಪೋರ್ಟ್ ಸಂಖ್ಯೆ- ಕೆ2127874, ಹನುಮಂತರಾಯಪ್ಪ ಪಾಸ್ಪೋರ್ಟ್ ನಂ- ಎ4003617, ರಂಗಪ್ಪ- ಝಡ್2400010, ರಮೇಶ್- ಎನ್7585076 ಆಧಾರದ ಮೇಲೆ ಈ ನಾಲ್ಕು ಮಂದಿ ಕರ್ನಾಟಕದವರೇ ಎಂದು ಖಚಿತಪಡಿಸಲಾಗಿತ್ತು.
ಉಳಿದಂತೆ ಇಂದು ಬೆಳಗ್ಗೆ ಬಂದಿರುವ ಹೆಸರುಗಳ ಪೈಕಿ ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್ ಅವರ ಪಾಸ್ಪೋರ್ಟ್ ನಂ.ಝಡ್3008393 ಎಂದು ಗುರುತಿಸಲಾಗುತ್ತಿದೆ. ಉಳಿದಂತೆ ಅಡಕಮಾರನಹಳ್ಳಿ ಮಾರೇಗೌಡ, ಒರೆಕ್ಯಾತನಹಳ್ಳಿ ಪುಟ್ಟರಾಜು ಮೃತ ಪಟ್ಟಿದ್ದಾರೆ.
ನಿನ್ನೆ ಖಚಿತವಾಗಿರುವ ಹನುಮಂತರಾಯಪ್ಪ ಅವರ ಪಾಸ್ಪೋರ್ಟ್ ನಂಬರ್ ಮತ್ತು ಇಂದು ಖಚಿತವಾಗಿರುವ ಹನುಮಯ್ಯ ಶಿವಕುಮಾರ್ (ಝಡ್4008074) ಎರಡೂ ಬೇರೆ ಬೇರೆ ಇವೆ. ಹೀಗಾಗಿ ಈ ಇಬ್ಬರು ಬೇರೆ ಬೇರೆ ಎಂದು ಗುರುತಿಸಲಾಗಿದೆ.ಇನ್ನು ರೇಮು ರೈ ತುಳಸೀರಾಮ್ ಅವರ ಪಾಸ್ಪೋರ್ಟ್ ಪತ್ತೆಯಾಗಿಲ್ಲ. ಹಾಗಾಗಿ ಅವರ ವಿಳಾಸವೂ ಖಚಿತಪಟ್ಟಿಲ್ಲ.
ಒಟ್ಟಾರೆ ನಿನ್ನೆಯಿಂದ ಈವರೆಗಿನ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದ ಎಂಟು ಮಂದಿ ಶ್ರೀಲಂಕಾದ ಸರಣಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.ರೇಮು ರೈ ತುಳಸೀರಾಮ್ ಮತ್ತು ನಾರಾಯಣ್ ಚಂದ್ರಶೇಖರ್ ಅವರ ವಿಳಾಸ ಪತ್ತೆಯಾಗದೆ ಇರುವುದರಿಂದ ಅವರು ಎಲ್ಲಿಯವರು ಎಂದು ನಿರ್ದಿಷ್ಟವಾಗಿ ಹೇಳಲಾಗುತ್ತಿಲ್ಲ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.
ಇನ್ನು ನಾಗರಾಜರೆಡ್ಡಿ ಅವರ ತಂಡದಲ್ಲಿ ಹೋಗಿದ್ದಂತಹ ಪುರುಷೋತ್ತಮ್ ರೆಡ್ಡಿ ಅವರು ಗಂಭೀರ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರಿನ ರಜೀನಾ ಮತ್ತು ನಾಗರಾಜ್ ದ್ವಾರಕಾನಾಥ್ ಅವರುಗಳು ಸರಣಿ ಬಾಂಬ್ ಸ್ಫೋಟಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ.
ಈ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು, ಅಲ್ಲಿ ಮೃತಪಟ್ಟವರನ್ನು ಗುರುತಿಸುವುದು ಹಾಗೂ ಪುನರ್ವಸತಿ ಕಾರ್ಯದಲ್ಲಿ ಅಧಿಕಾರಿಗಳು ಹೆಚ್ಚಾಗಿ ನಿರತರಾಗಿದ್ದು, ಸಾವನ್ನಪ್ಪಿರುವವರ ಮಾಹಿತಿ ಪಡೆದುಕೊಳ್ಳಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ.
ನೇರವಾಗಿ ಶ್ರೀಲಂಕಾ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ರಾಯಭಾರಿ ಕಚೇರಿ ಮೂಲಕವೇ ಸಂಪರ್ಕ ಸಾಧಿಸಬೇಕಿದೆ.ಹೀಗಾಗಿ ಪ್ರತಿಕ್ಷಣವೂ ಅಧಿಕಾರಿಗಳು ಮಾಹಿತಿಗಾಗಿ ಕಾದು ಕುಳಿತಿದ್ದಾರೆ.