ಬೆಂಗಳೂರು, ಏ.23- ಕಲಬುರಗಿ, ಬಾಗಲಕೋಟೆ ಮತ್ತು ವಿಜಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಏಜೆಂಟರ್ಗಳನ್ನು ಬಿಡದೆ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರನ್ನು ಇಂದು ಭೇಟಿ ಮಾಡಿದ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ನೇತೃತ್ವದ ನಿಯೋಗ, ತಕ್ಷಣವೇ ಪಕ್ಷಪಾತ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಈ ಮೂರು ಲೋಕಸಭಾ ಕ್ಷೇತ್ರಗಳಿಗೆ ಪಕ್ಷದ ವತಿಯಿಂದ ಏಜೆಂಟರ್ಗಳನ್ನು ನೇಮಕ ಮಾಡಲಾಗಿತ್ತು. ಸಂಬಂಧಪಟ್ಟ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದೆವು.
ನಮ್ಮ ಪಕ್ಷದ ಏಜೆಂಟರ್ಗಳನ್ನು ಬಿಡದೆ ಕಾಂಗ್ರೆಸ್ನ ಏಜೆಂಟರ್ಗಳನ್ನು ಮಾತ್ರ ಬಿಡಲಾಗಿದೆ. ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಕೆಲವು ಅಧಿಕಾರಿಗಳು ಕಾಂಗ್ರೆಸ್ನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅಂಥವರ ಮೇಲೆ ಕೂಡಲೇ ಕ್ರಮ ಜರುಗಿಸಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ನೀಡುವಂತೆ ಕೋರಿದರು.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಕಲಬುರಗಿ, ಬಾಗಲಕೋಟೆ ಮತ್ತು ವಿಜಾಪುರದಲ್ಲಿ ನ್ಯಾಯಯುತ ಮತದಾನ ನಡೆಯುತ್ತಿಲ್ಲ. ಸೋಲಿನ ಭೀತಿಗೆ ಒಳಗಾಗಿರುವ ಕಾಂಗ್ರೆಸ್ ವಾಮಮಾರ್ಗದ ಮೂಲಕ ಗೆಲ್ಲಲು ಹೊರಟಿದೆ ಎಂದು ಆರೋಪಿಸಿದರು.
ಯಾವ ಕಾರಣಕ್ಕೆ ಏಜೆಂಟರ್ಗಳನ್ನು ಮತಗಟ್ಟೆಗೆ ಬಿಟ್ಟಿಲ್ಲ ಎಂಬುದು ತಿಳಿದಿಲ್ಲ. ಒಂದು ಪಕ್ಷದವರನ್ನು ಬಿಟ್ಟು ಇನ್ನೊಂದು ಪಕ್ಷದವರನ್ನು ತಡೆ ಹಿಡಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗುಲ್ಬರ್ಗದಲ್ಲಿ ಕೆಲ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ವಾಹನಗಳ ಮೂಲಕವೇ ಹಣ ಸಾಗಾಣಿಕೆ ಮಾಡಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಖರ್ಗೆಗೆ ಆತ್ಮೀಯರಾಗಿರುವ ಅಧಿಕಾರಿಗಳು ಕಾಂಗ್ರೆಸ್ನಂತೆ ವರ್ತನೆ ಮಾಡುತ್ತಿದ್ದಾರೆ. ಕೂಡಲೇ ಆಯೋಗ ಈ ಅಧಿಕಾರಿಗಳನ್ನು ಸೇವೆಯಿಂದ ಅಮಾನತಿನಲ್ಲಿಡುವಂತೆ ಆಗ್ರಹಿಸಿದರು.
ಪೊಲೀಸ್ ವಾಹನದಲ್ಲೇ ಹಣ ಸಾಗಾಣಿಕೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಸೋಲುವ ಭೀತಿಯಿಂದ ಕಾಂಗ್ರೆಸ್ ಅನೇಕ ಕಡೆ ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಿಯೋಗದಲ್ಲಿ ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್, ಮುಖಂಡರಾದ ವಿನೋದ್ಕುಮಾರ್, ದತ್ತಗುರು ಹೆಗಡೆ ಮತ್ತಿತರರು ಇದ್ದರು.