ಬೆಂಗಳೂರು, ಏ.23-ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಬಾಂಬ್ ಸ್ಫೋಟ ಘಟನೆಯಲ್ಲಿ ಮೃತಪಟ್ಟಿರುವ ಕನ್ನಡಿಗರ ಮೃತ ದೇಹಗಳನ್ನು ರಾಜ್ಯಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ತಾವು ಮಾತನಾಡಿದ್ದು, ಮೃತದೇಹಗಳನ್ನು ಕಳುಹಿಸಿಕೊಡಲು ಸಿದ್ಧತೆ ಮಾಡಿದ್ದಾರೆ.
ಅಲ್ಲದೆ, ಶ್ರೀಲಂಕಾ ಪ್ರವಾಸದಲ್ಲಿದ್ದ ಕೆಲವು ಕನ್ನಡಿಗರು ನಾಪತ್ತೆಯಾಗಿದ್ದು, ಅವರ ಪತ್ತೆಗೂ ಕೂಡ ಅಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಿಂದಲೂ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿ, ನಾಪತ್ತೆಯಾಗಿರುವ ಕನ್ನಡಿಗರ ಪತ್ತೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.
ಶ್ರೀಲಂಕಾದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾದವರ ವಿಚಾರಕ್ಕೆ ಸಂಬಂಧಪಟ್ಟಂತೆ ನಿನ್ನೆಯಿಂದಲೂ ಮುಖ್ಯಮಂತ್ರಿ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.