ಬೆಂಗಳೂರು,ಏ.23- ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮುಗಿಯುತ್ತಿರುವ ಹಂತದಲ್ಲೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲ ಮತ್ತೆ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಶಾಸಕ ಹಾಗೂ ಕಾಂಗ್ರೆಸ್ನ ಖಾಯಂ ಭಿನ್ನಮತೀಯನೆಂದೇ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ, ಆಪರೇಷನ್ ಕಮಲ ಆರಂಭವಾಗಲಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಿದೆ.
ಇಂದು ಸ್ವಕ್ಷೇತ್ರ ಗೋಕಾಕ್ನಲ್ಲಿ ಮತ ಚಲಾಯಿಸಿದ ಬಳಿಕ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಯಾವಾಗ ರಾಜೀನಾಮೆ ನೀಡುತ್ತೇನೆ ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ರಮೇಶ್ ಜಾರಕಿ ಹೊಳಿ ಹೇಳಿದರು.
ನಾನಿನ್ನು ತಾಂತ್ರಿಕವಾಗಿ ಕಾಂಗ್ರೆಸ್ನಲ್ಲೇ ಉಳಿದಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ನಾನು ಕತ್ತಲಿನಲ್ಲಿ ಕುಳಿತು ಕಲ್ಲು ಹೊಡೆಯುವ ಜಾಯಮಾನದವನಲ್ಲ. ಏನಿದ್ದರೂ ನೇರವಾಗಿ ಮಾತನಾಡುವವನು. ಸುಳ್ಳು ಹೇಳುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ ಎಂದರು.
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ನಲ್ಲಿ ಉಂಟಾಗಿರುವ ಭಿನ್ನಮತವನ್ನು ಪರಿಹರಿಸುವುದು ಅಷ್ಟು ಸರಳವಾಗಿಲ್ಲ. 1999ರವರೆಗೆ ಮಾತ್ರ ಕಾಂಗ್ರೆಸ್ ಗಟ್ಟಿಯಾಗಿತ್ತು.ಅಂದಿನಿಂದ ಇಂದಿನವರೆಗೂ ಜಿಲ್ಲಾ ಮುಖಂಡರು ಪರಸ್ಪರ ಒಬ್ಬರ ಮುಖ ಇನ್ನೊಬ್ಬರು ನೋಡದ ಸ್ಥಿತಿಯಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿಗೆ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದರು.ತಕ್ಷಣವೇ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಆಗಮಿಸಿ ಅಸಮಾಧಾನ ದೂರ ಮಾಡಿದ್ದರು. ಈವರೆಗೂ ಕಾಂಗ್ರೆಸ್ ನಾಯಕರು ಅಂತಹ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತೀಶ್ಗೆ ತಲೆಕೆಟ್ಟಿದೆ:
ತಮ್ಮ ಸಹೋದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಲೆಕೆಟ್ಟವರಂತೆ ಮಾತನಾಡುವುದನ್ನು ನಿಲ್ಲಿಸಬೇಕು.ಅವರು ಹತಾಶೆಯಿಂದ ಏನೇನೊ ಮಾತನಾಡುತ್ತಿದ್ದಾರೆ.ಈಗಾಗಲೇ ಒಬ್ಬ ಸಹೋದರರನ್ನು ಹಾಳು ಮಾಡಿದ್ದು ಸಾಕು. ಮತ್ತೊಬ್ಬ ಸಹೋದರನನ್ನು ಹಾಳು ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.
ಲಕನ್ ಜಾರಕಿಹೊಳಿ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಮುಖ್ಯ. ಅವರು ಶಾಸಕರಾದರೆ ನನ್ನಷ್ಟು ಖುಷಿ ಪಡುವವರೇ ಇಲ್ಲ. ಸತೀಶ ಸೋಲುವ ಭೀತಿಯಿಂದಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಹೆಚ್ಚು ಮಾತನಾಡಿರುವುದೇ ಒಳ್ಳೆಯದು ಎಂದರು.