ಉಡುಪಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡೇ ದಿನಕ್ಕೆ ಆಯುರ್ವೇದಿಕ್ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಟಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಆರೋಗ್ಯ ಸುಧಾರಿಸಲು ನಾನು ಉಡುಪಿಗೆ ಬಂದಿದ್ದೆ. ಆದರೆ ಶ್ರೀಲಂಕಾದ ಸ್ಫೋಟ ಪ್ರಕರಣ ನನ್ನನ್ನು ಘಾಸಿಗೊಳಿಸಿದೆ. ಸೋಮವಾರದಿಂದ ನನಗೆ ಇದೇ ತಲೆಯಲ್ಲಿ ಕಾಡುತ್ತಿದೆ. ಬಾಂಬ್ ಪ್ರಕರಣದಲ್ಲಿ ನನ್ನ ಆತ್ಮೀಯರು ಮರಣ ಹೊಂದಿದ್ದಾರೆ. ಮೂರು ನಾಲ್ಕು ದಿನ ಕಾಪುವಿನಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆಂದು ಉಳಿದುಕೊಳ್ಳಬೇಕೆಂದಿದ್ದೆ. ಆದರೆ ನಿನ್ನೆಯಿಂದ ನನಗೆ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ. ಅವರು 27 ರ ನಂತರ ಮತ್ತೆ ಉಡುಪಿಗೆ ಬರಲು ಸೂಚಿಸಿದ್ದಾರೆ. ಚಿಕಿತ್ಸೆ ಮುಂದೂಡಿ ಕರ್ತವ್ಯ ಮಾಡಲು ಹೊರಟಿದ್ದೇನೆ ಎಂದು ಹೇಳಿದರು.
ಅತ್ಯಂತ ಮೃಗೀಯ ಘಟನೆ
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ಸ್ಫೋಟ ಅತ್ಯಂತ ಮೃಗೀಯವಾದ ಘಟನೆಯಾಗಿದೆ. ಈ ಘಟನೆಯಲ್ಲಿ ಅಲ್ಲಿನ ಜನರು ಮತ್ತು ಪ್ರವಾಸಿಗರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ರಾಜ್ಯದಿಂದ ಅನೇಕರು ಶ್ರೀಲಂಕಾಗೆ ಪ್ರವಾಸಹೋಗಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೊದಲು ನಾನು ನೊಂದ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಅದರಲ್ಲೂ ನನ್ನ ಪಕ್ಷದ ಐದು ಜನ ನಾಯಕರು ಮೃತಪಟ್ಟಿದ್ದಾರೆ. ಅವರು ಪಕ್ಷದ ಆಧಾರ ಸ್ತಂಭಗಳಾಗಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದೆ. ಈ ರೀತಿ ನನ್ನ ಪಕ್ಷದ ನಾಯಕರು ಮೃತಪಡುತ್ತಾರೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ಈ ಐವರು ನಮ್ಮ ಪಕ್ಷದ ಶಕ್ತಿಯಾಗಿದ್ದು, ಅವರ ಅಗಲಿಕೆಯಿಂದ ನೆಲಮಂಗಲದಲ್ಲಿ 50% ಶಕ್ತಿ ಕುಸಿತವಾಗಿದೆ. ಪ್ರಾಮಾಣಿಕ, ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ ಎಂದು ದುಃಖದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.
ಸದ್ಯಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಶ್ರೀಲಂಕಾ ಸಚಿವಾಲಯ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಏಳು ಪಾರ್ಥಿವ ಶರೀರವನ್ನು ಗುರುತಿಸಲಾಗಿದೆ. ಅಧಿಕಾರಿ ಮಂಜುನಾಥ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಗಾಗ ಕರೆ ಮಾಡಿ ನಾನು ಮಾತನಾಡುತ್ತಿದ್ದೇನೆ. ಮರಣೋತ್ತರ ಪ್ರಕ್ರಿಯೆ ಶೀಘ್ರವಾಗಿ ಮುಗಿಸಲು ಮನವಿ ಮಾಡಲಾಗಿದ್ದು, 24 ಗಂಟೆಯೊಳಗೆ ಪಾರ್ಥೀವ ಶರೀರ ಕಳುಹಿಸಲು ಪ್ರಯತ್ನಿಸುತ್ತೇವೆ. ಕೃಷ್ಣಪ್ಪ ಮತ್ತು ಶ್ರೀನಿವಾಸ ಮೂರ್ತಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಜೊತೆಗೆ ಖಾಸಗಿ ಏರ್ ಕಾರ್ ಕಾರ್ಗೋಗೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಬೆಳಗ್ಗೆಯೊಳಗೆ ಮೃತದೇಹ ಕರ್ನಾಟಕಕ್ಕೆ ಬರಬೇಕು. ಈ ಬಗ್ಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.