ಬೆಂಗಳೂರು : ದೇಶದಲ್ಲಿ 3 ನೇ ಹಂತ ಹಾಗೂ ರಾಜ್ಯದಲ್ಲಿ 2 ನೇ ಹಂತದ ಲೋಕಸಭಾ ಚುನಾವಣಾ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ .
ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಕೆಲವು ಮತಗಟ್ಟೆಗಳಲ್ಲಿ ಇವಿಎಂ ಗಳಲ್ಲಿ ದೋಷ ಕಂಡು ಬಂದಿದ್ದು, ಮತದಾನ ವಿಳಂಬವಾಗಿದೆ.
ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು , ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರರು ನಿರ್ಧಾರಿಸಲಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಮಲ್ಲಿಕಾರ್ಜುನ ಖರ್ಗೆ, ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ್, ಮಧು ಬಂಗಾರಪ್ಪ, ಬಿ.ವೈ. ರಾಘವೇಂದ್ರ, ವಿ.ಎಸ್.ಉಗ್ರಪ್ಪ , ಈಶ್ವರ್ ಖಂಡ್ರೆ, ಪ್ರಹ್ಲಾದ್ ಜೋಶಿ, ವಿನಯ ಕುಲಕರ್ಣಿ, ಸುರೇಶ್ ಅಂಗಡಿ, ಪ್ರಕಾಶ್ ಹುಕ್ಕೇರಿ, ಭಗವಂತ್ ರಾವ್ ಖೂಬಾ, ಗದ್ದಿ ಗೌಡರ್, ಕರಡಿ ಸಂಗಣ್ಣ ಸೇರಿ 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದಲ್ಲಿ 14, ಗುಜರಾತ್ 26, ಕೇರಳ 20, ಅಸ್ಸಾಂ 4, ಬಿಹಾರ 5, ಛತ್ತೀಸ್ಗಢ 7, ಒಡಿಶಾ 6, ಉತ್ತರ ಪ್ರದೇಶ 10 ಸೇರಿ ದಂತೆ 116 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು,ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.