ನವದೆಹಲಿ: ರಾಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಉಚ್ಛರಿಸಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ತೀರ್ಪನ್ನು ತಪ್ಪಾಗಿ ವಿವರಿಸಿದ್ದ ರಾಹುಲ್ ಅವರಿಗೆ ಕೋರ್ಟ್ ಏಪ್ರಿಲ್ 22 ರೊಳಗೆ ತಮ್ಮ ಮಾತಿಗೆ ತಕ್ಕ ವಿವರಣೆಯನ್ನು ನೀಡಬೇಕೆಂದು ನಿರ್ದೇಶನ ನೀಡಿತ್ತು. ಇದರಂತೆ ಅವರು ಇಂದು ನ್ಯಾಯಾಲಯಕ್ಕೆ ವಿವರಣೆ ಸಲ್ಲಿಸಿ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜಕೀಯ ಪ್ರಚಾರದ ವೇಳೆ ನೀಡಿದ ಹೇಳಿಕೆ ಅದಾಗಿದ್ದು, ವಿರೋಧಿಗಳು ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉತ್ತರಿಸಿದ್ದಾರೆ.
‘ರಾಜಕೀಯ ಪ್ರಚಾರದ ಬಿಸಿಯಲ್ಲಿ ಆ ಹೇಳಿಕೆ ನೀಡಿದ್ದೆ… ನನ್ನ ರಾಜಕೀಯ ವಿರೋಧಿಗಳು ಅದನ್ನು ತಪ್ಪಾಗಿ ಬಿಂಬಿಸಿದರು. ನಾನು ಉದ್ದೇಶಪೂರ್ವಕವಾಗಿ ‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಹೇಳಿದ್ದಾಗಿ ಎದುರಾಳಿಗಳು ಅಪಪ್ರಚಾರ ನಡೆಸಿದ್ದಾರೆ. ಅದಕ್ಕಾಗಿ ವಿಷಾದಿಸುತ್ತೇನೆ. ಇನ್ನು ನಾನು ಅಂತಹ ಹೇಳಿಕೆ ನೀಡುವುದಿಲ್ಲ’ ಎಂದು ರಾಹುಲ್ ಗಾಂಧಿ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕಿ ಹಾಗೂ ಸಂಸದೆ ಮೀನಾಕ್ಷಿ ಲೇಖಿ, ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಿದ್ದರು. ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿ ಕೋರ್ಟಿನ ಬಗ್ಗೆಯೂ ಜನರಲ್ಲಿ ಪೂರ್ವಗ್ರಹ ಹುಟ್ಟಿಸಲು ಯತ್ನಿಸಿದ್ದಾರೆ ಎಂದು ದೂರಿದ್ದರು.
Rahul Gandhi Regrets In Court Rafale Comments “Made In Heat Of Campaign