ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 7 ಜನ ಜೆಡಿಎಸ್ ಮುಖಂಡರು ಬಾಂಬ್ ಸ್ಫೋಟದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂಬುವರು ಮೃತಪಟ್ಟಿದ್ದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟರ್ನಲ್ಲಿ ಖಚಿತಪಡಿಸಿದ್ದರು. ಉಳಿದ ಐವರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿತ್ತು. ಆದರೆ, ಈಗ ಏಳೂ ಮಂದಿ ಮೃತಪಟ್ಟಿದ್ದಾರೆ ಎಂದು ಖಚಿತವಾಗಿದೆ.
ತುಮಕೂರಿನ ರಮೇಶ್ ಗೌಡ, ನೆಲಮಂಗಲದ ಲಕ್ಷ್ಮೀನಾರಾಯಣ್, ನೆಲಮಂಗಲ ನಿವಾಸಿ ಶಿವಕುಮಾರ್, ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ, ಹ್ಯಾರೋಕೇತನಹಳ್ಳಿಯ ಪುಟ್ಟರಾಜು ಕೂಡ ಸಾವನ್ನಪ್ಪಿದ್ದಾರೆ. ಇವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ದೇಹಗಳನ್ನು ಭಾರತಕ್ಕೆ ಕರೆತರಲು ಸಿದ್ಧತೆ ನಡೆಯುತ್ತಿದೆ.
ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಕೊಲಂಬೋ ಪ್ರವಾಸದಲ್ಲಿದ್ದ ಜೆಡಿಎಸ್ನ ಏಳು ಮಂದಿ ಬಾಂಬ್ ಸ್ಫೋಟಕ್ಕೆ ಸಿಲುಕಿದ್ದಾರೆ ಎಂದು ಕೇಳಿ ನನಗೆ ಆಘಾತ, ನೋವು ಉಂಟಾಗಿದೆ. ನಾನು ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಎಚ್.ಡಿ.ದೇವೇಗೌಡರು ಕೂಡ ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಶ್ರೀಲಂಕಾದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸಿ 200 ಕ್ಕೂ ಹೆಚ್ಚು ಅಮಾಯಕರ ಬಲಿ ಪಡೆದ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಕನ್ನಡಿಗರು ಸೇರಿ ಮೃತಪಟ್ಟ ಎಲ್ಲರಿಗೂ ನನ್ನ ದುಃಖತಪ್ತ ಸಂತಾಪ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.