ಕಲ್ಬುರ್ಗಿ, ಏ.21- ನಾನು ಮಾರಾಟವಾಗಿರುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸೋಲಿನ ಭೀತಿಯಿಂದ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಬಿಟ್ಟು ಹೋಗುವುದು ಖಚಿತವಾಗುತ್ತಿದ್ದಂತೆ ಬೆದರಿದ ಕಾಂಗ್ರೆಸ್ ನಾಯಕರು ನನ್ನನ್ನು ವಾಪಸ್ ಕರೆಸಿಕೊಳ್ಳಲು ಪ್ರಯತ್ನಿಸಿದರು. ಖುದ್ದಾಗಿ ಸಚಿವ ಪ್ರಿಯಾಂಕ ಖರ್ಗೆ ಅವರೇ ವಾಪಸ್ ಬರುವಂತೆ ಮನವಿ ಮಾಡಿದರು.
ನಾನು ನಿರ್ಧಾರ ಬದಲಿಸದೆ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಅಪಪ್ರಚಾರ ಮಾಡಿದ್ದಾರೆ. ನಾನು ಮಾರಾಟವಾಗಿರುವ ಬಗ್ಗೆ ಅವರ ಬಳಿ ದಾಖಲೆಗಳಿದ್ದರೆ ಸಾಬೀತು ಪಡಿಸಲಿ. ಪಕ್ಷ ಬದಲಾವಣೆ ಮಾಡಿರುವುದು ನಾನೊಬ್ಬನೇ ಅಲ್ಲ. ಬಹಳಷ್ಟು ಮಂದಿ ರಾಜಕೀಯವಾಗಿ ಬದಲಾಗಿದ್ದಾರೆ. ಅದನ್ನು ಮಾರಾಟ ಎಂದು ಅಪಪ್ರಚಾರ ಮಾಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ನಾನು ನಿನ್ನೆ ನೀಡಿರುವ ಟೀಕೆಯನ್ನು ತಿರುಚಲಾಗಿದೆ. ಬಿಜೆಪಿಯಲ್ಲಿ ನಾನಿನ್ನೂ ಸೆಟಲ್ ಆಗುತ್ತಿದ್ದೇನೆ. ನನಗೆ ಸಹಾಯ ಮಾಡಿ ಎಂದು ದಲಿತ ನಾಯಕರಾದ ಗೋವಿಂದ ಕಾರಜೋಳ ಅವರಲ್ಲಿ ಮನವಿ ಮಾಡಿದ್ದೇನೆ. ನಾನು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಶಶಿಕುಮಾರ್ ಅವರು ಗುಲ್ಬರ್ಗಾಕ್ಕೆ ಬಂದಿರುವುದನ್ನು ಜಿಲ್ಲಾಧಿಕಾರಿಯವರೇ ಖಚಿತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುವ ಅವರು ಚುನಾವಣೆ ವೇಳೆ ಇಲ್ಲಿಗೆ ಬರುವ ಅಗತ್ಯ ಏನಿತ್ತು?ಅವರು ಬಂದಿರುವುದರಿಂದ ನಮ್ಮ ಬೆಂಬಲಿಗರಲ್ಲಿ ಆತಂಕ ಉಂಟಾಗಿದೆ. ಹಾಗಾಗಿ ನಾನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ಖರ್ಗೆಯವರು ಸೋಲುತ್ತಾರೆ. ಅವರು ಈವರೆಗೂ ಮಾಡದೆ ಇರುವ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿ ತೋರಿಸುತ್ತೇನೆ ಎಂದರು.