ಮಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರು 8 ಕಡೆ ಸರಣಿ ಬಾಂಬ್ ಸ್ಫೋಟ ನಡೆಸಿದ್ದು, ಈ ವರೆಗೂ ಮೃತಪಟ್ಟವರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. ಈ ನಡುವೆ ಬಾಂಬ್ ಸ್ಫೋಟದಲ್ಲಿ ಮಂಗಳೂರು ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಹಿಳೆಯನ್ನು ಬೈಕಂಪಾಡಿ ಮೂಲದ ಅಬ್ದುಲ್ ಖಾದರ್ ಕುಕ್ಕಾಡಿ ಅವರ ಪತ್ನಿ ರಝೀನಾ ಖಾದರ್ ಕುಕ್ಕಾಡಿ(58) ಎಂದು ಗುರುತಿಸಲಾಗಿದೆ.
ಮೂಲತ: ಮಂಗಳೂರಿನವರಾದ ಈ ದಂಪತಿ ದುಬೈನಲ್ಲಿ ವಾಸವಾಗಿದ್ದಾರೆ. ಕೊಲಂಬೋದಲ್ಲಿ ನೆಲೆಸಿರುವ ಸಂಬಂಧಿಕರನ್ನು ಭೇಟಿಯಾಗಲೆಂದು ದಂಪತಿ ತೆರಳಿದ್ದರು. ಕೊಲಂಬೊದ ಶಾಂಗ್ರಿಲಾ ಹೊಟೇಲ್ನಲ್ಲಿ ರಝೀನಾ ಹಾಗೂ ಅಬ್ದುಲ್ ದಂಪತಿ ಇದ್ದರು. ಆದರೆ ಪತಿ ಅಬ್ದುಲ್, ದುಬೈಗೆಂದು ವಿಮಾನದಲ್ಲಿ ಹೊರಟಿದ್ದರು. ಪತ್ನಿ ರಝೀನಾ ಹೋಟೆಲ್ ನಲ್ಲೇ ತಂಗಿದ್ದರು. ಈ ವೇಳೆ ಶಾಂಗ್ರಿಲಾ ಹೊಟೇಲ್ನಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ಸ್ಫೋಟದಲ್ಲಿ ರಝೀನಾ ಮೃತಪಟ್ಟಿದ್ದಾರೆ. ಅಬ್ದುಲ್ ಖಾದರ್ ಪಾರಾಗಿದ್ದಾರೆ.
ಆತ್ಮಹುತಿ ದಾಳಿಕೋರ ಝಾರನ್ ಹಶೀಂ ಎಂಬಾತ ಕೊಲಮ್ಬೊದ ಶಾಂಗ್ರಿಲಾ ಹೋಟೆಲ್ ನಲ್ಲಿ ಬಾಂಬ್ ಸ್ಫೋಟಿಸಿದ್ದರೆ, ಬ್ಯಾಟಿಕೊಲೊ ಚರ್ಚ್ ಮೇಲೆ ಅನು ಮೊಹಮ್ಮದ್ ಎಂಬಾತ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಈವರೆಗೇ ಕೊಲಂಬೋದ 8 ಕಡೆಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಬೆಳಗ್ಗೆ 6 ಕಡೆಯಲ್ಲಿ ಸ್ಫೋಟ ಸಂಭವಿಸಿತ್ತು. ಮಧ್ಯಾಹ್ನ ಮತ್ತೆ 3 ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಘಟನೆಯಲ್ಲಿ 185 ಜನ ಸಾವನ್ನಪ್ಪಿದ್ದರೆ, 500 ಜನರು ಗಾಯಗೊಂಡಿದ್ದಾರೆ.
Easter Bomb Attacks ,Sri Lanka, Churches, Hotels,mangaluru women death