ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗುತ್ತಿರುವ ಭೋಪಾಲ ಲೋಕಸಭಾ ಕ್ಷೇತ್ರ ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್, ಈಗ ಮತ್ತೊಂದು ವಿವಾದಕ್ಕೀಡಾಗಿದ್ದು, ಚುನಾವಣಾ ಆಯೋಗ ಅವರ ವಿರುದ್ಧ ಮತ್ತೊಂದು ನೋಟೀಸ್ ಜಾರಿ ಮಾಡಿದೆ.
ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂಬ ಹೇಳಿಕೆ ಯನ್ನು ಸಾದ್ವಿ ಪ್ರಗ್ಯಾ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಾಧ್ವಿ ಪ್ರಗ್ಯಾ ಸಿಂಗ್, ಬಾಬ್ರಿ ಮಸೀದಿ ನಾಶಗೊಳಿಸಿದ್ದಕ್ಕೆ ನಾವೇಕೆ ಬೇಸರಪಡಬೇಕು? ಅದರಲ್ಲಿ ತಪ್ಪು ಏನಿದೆ? ಹೆಮ್ಮೆ ಪಡುವ ವಿಚಾರ ಅದು. ದೇಶಕ್ಕೆ ಅಂಟಿದ್ದ ದೋಷವನ್ನು ನಾವು ಅಲ್ಲಿಂದ ತೊಳೆದಿದ್ದೇವೆ ಅಷ್ಟೇ. ಇದು ನಮ್ಮ ದೇಶದ ಸ್ವಾಭಿಮಾನ ತೋರಿಸುತ್ತದೆ. ಅಲ್ಲಿ ವೈಭವದ ರಾಮ ದೇವಾಲಯವನ್ನು ಕಟ್ಟುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೇ ಬಾಬ್ರಿ ಮಸೀದಿ ಧ್ವಂಸದಲ್ಲಿ ನನಗೂ ಒಂದು ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಳ್ಳಲು ತುಂಬ ಹೆಮ್ಮೆಯೆನಿಸುತ್ತದೆ. ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದಿದ್ದಾರೆ.
ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಅಧಿಕಾರಿ ಹೇಮಂತ್ ಕರ್ಕರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಈಗಾಗಲೇ ಒಂದು ನೋಟಿಸ್ ಪಡೆದಿರುವ ಸಾಧ್ವಿ ಪ್ರಜ್ಞಾ ಸಿಂಗ್ ಈಗ ಮತ್ತೆ ಚುನಾವಣಾ ಆಯೋಗದ ಕೆಂಗಣ್ನಿಗೆ ಗುರಿಯಾಗಿದ್ದು, ಆಯೋಗ ಈಗ ಮತ್ತೊಂದು ನೋಟಿಸ್ ನೀಡಿದೆ.