ನವದೆಹಲಿ: ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಲ್ಲಿ ಸಿಲುಕಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವೆ ಸುಷ್ಮ ಅಸ್ವರಾಜ್, ಲಿಬಿಯಾ ರಾಜಧಾನಿಯಲ್ಲಿ ಭಾರತೀಯರು ಸಿಲುಕಿ ಹಾಕಿಕೊಂಡಿದ್ದರೆ ಅವರು ತಕ್ಷಣವೇ ನಗರ ತೊರೆದು ಹೊರಬರಲಿ, ನಿಧಾನ ಮಾಡಿದರೆ ನಂತರ ನಮಗೆ ಅವರನ್ನು ಸ್ಥಳಾಂತರ ಮಾಡಲು ಸಾಧ್ಯವಾಗದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಲಿಬಿಯಾದಿಂದ ಸಾಮೂಹಿಕವಾಗಿ ಜನರ ಸ್ಥಳಾಂತರವಾದ ನಂತರ ಮತ್ತು ಪ್ರಯಾಣ ನಿರ್ಬಂಧದ ನಂತರ 500ಕ್ಕೂ ಹೆಚ್ಚು ಭಾರತೀಯರು ಟ್ರಿಪೊಲಿಯಲ್ಲಿ ಇದ್ದಾರೆ. ಅಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ. ಸದ್ಯ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ನಿಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ತಕ್ಷಣವೇ ನಗರ ತೊರೆಯಲು ಹೇಳಿ, ಇಲ್ಲದಿದ್ದರೆ ನಂತರ ನಮಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಶ್ವಸಂಸ್ಥೆ ಬೆಂಬಲಿತ ಪ್ರಧಾನ ಮಂತ್ರಿ ಫಯೇಝ್ ಅಲ್ ಸರ್ರಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಲಿಬಿಯಾದ ಮಿಲಿಟರಿ ಕಮಾಂಡರ್ ಖಲಿಫಾ ಹಫ್ತರ್ ಅವರ ಪಡೆ ದಾಳಿ ನಡೆಸಲು ಆರಂಭಿಸಿದ ನಂತರ ಕಳೆದ ಎರಡು ವಾರಗಳಲ್ಲಿ ಟ್ರಿಪೊಲಿಯಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬಿಗುವಿನ ವಾತಾವರನ ನಿರ್ಮಾಣವಾಗಿದೆ.
Pls ask your relatives and friends to leave Tripoli immediately: sushma swaraj