ಬೆಳಗಾವಿ, ಏ.20-ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದರಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯತ್ತ ವಾಲಿದ್ದಾರೆ. ರಮೇಶ್ ಜಾರಕಿ ಹೊಳಿ ಬಹಿರಂಗವಾಗಿ ಪ್ರಚಾರ ನಡೆಸದಿದ್ದರೂ ಅವರ ಅಳಿಯ ಅಂಬಿರಾವ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪರವಾಗಿ ಪ್ರಚಾರ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇನ್ನೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ವಿರೂಪಾಕ್ಷ ಸಾದುನವರ್ ಅವರ ಪರವಾಗಿ ಪ್ರಚಾರ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.
ಕಾಂಗ್ರೆಸ್ ನಾಯಕರು ಕೂಡ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಚಿಕ್ಕೋಡಿಗೆ ಆಗಮಿಸಿ ಚುನಾವಣಾ ಪ್ರಚಾರ ಕೈಗೊಂಡರೂ ಕೂಡ ರಮೇಶ್ ಜಾರಕಿಹೊಳಿ ಆಗಮಿಸದೆ ಬಂಡಾಯದ ಬಾವುಟವನ್ನು ಎತ್ತಿ ಹಿಡಿದಿದ್ದರು. ಸಿದ್ದರಾಮಯ್ಯ ಖುದ್ದಾಗಿ ಸಂಧಾನಕ್ಕೆ ಮುಂದಾದರೂ ಕೂಡ ಪರಿಸ್ಥಿತಿ ತಿಳಿಗೊಂಡಿಲ್ಲ.
ಅನಿವಾರ್ಯವಾಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಒತ್ತಡ ಹೇರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಸುವಂತೆ ತಾಕೀತು ಮಾಡಲಾಗಿದೆ.
ಜಿಲ್ಲೆಯಲ್ಲಿ ಈ ಇಬ್ಬರೂ ಸಹೋದರರು ಪ್ರಭಾವಿಗಳಾಗಿದ್ದು, ಯಾರ ವಿರೋಧವನ್ನೂ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿದ್ದಾರೆ. ಹೀಗಾಗಿ ಅಣ್ಣ ತಮ್ಮಂದಿರ ಜಗಳದಲ್ಲಿ ಕಾರ್ಯಕರ್ತರು ಬೇಸತ್ತಿದ್ದು, ಈ ಇಬ್ಬರ ಸಹವಾಸವೇ ಬೇಡ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಷೇತ್ರಬಿಟ್ಟು ಹೋಗಿದ್ದಾರೆ.
ಹೀಗಾಗಿ ಗೋಕಾಕ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೆಲಸ ಮಾಡುವ ಮುಖಂಡರುಗಳೇ ಇಲ್ಲದಂತಾಗಿದೆ.
ರಮೇಶ್ ಜಾರಕಿಹೊಳಿ ಅವರು ಬಹುತೇಕ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹೀಗಾಗಿ ಅವರು ಕಾಂಗ್ರೆಸ್ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಬಳಿಕ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ನಂತರ ನಡೆಯುವ ಉಪಚುನಾವಣೆಯಲ್ಲಿ ರಮೇಶ್ ಜಾರಕಿ ಹೊಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜಾರಕಿ ಹೊಳಿ ಅವರ ಇನ್ನೊಬ್ಬ ಸಹೋದರ ಲಖನ್ ಜಾರಕಿ ಹೊಳಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ.ಹೀಗಾಗಿ ಲಖನ್ ಜಾರಕಿ ಹೊಳಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.