ರಾಂಪುರ: ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ದೇಶದ್ರೋಹಿಗಳು, ಉಗ್ರರು ಎಂಬಂತೆ ಕಾಣಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್ ಬೇಸರವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಿರಿಯ ನಟಿ ಜಯಪ್ರದಾ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಬಿಡುಗಡೆ ಮಾಡಿದ್ದ ಅಜಂಖಾನ್ ಮತ್ತು ಬೆಂಬಲಿಗರ ವಿರುದ್ಧ ಪೊಲಿಸರು ಮತ್ತು ಮಹಿಳಾ ಆಯೋಗದ ಸದಸ್ಯರು ಸೇರಿ ಹಲವು ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ಅಜಂಖಾನ್ ಅವರ ಬೇಸರಕ್ಕೆ ಕಾರಣವಾಗಿದೆ.
ಇದರಿಂದ ನೊಂದುಕೊಂಡಿರುವ ಅವರು, ಪೊಲೀಸರು ಮತ್ತಿತರ ಅಧಿಕಾರಿಗಳು ನನ್ನನ್ನು ವಿಶ್ವದ ಅತಿ ಭಯಾನಕ ಉಗ್ರನೆಂಬಂತೆ ನೋಡುತ್ತಿದ್ದಾರೆ. ನನ್ನ ಬೆಂಬಲಿಗರನ್ನು ಉಗ್ರರೆಂದು ಭಾವಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಬದಲು ಅವರಿಗೆ ಅಧಿಕಾರ ಇರುವುದೇ ಆದರೆ, ನನಗೆ ಗುಂಡಿಟ್ಟು ಒಮ್ಮೆಲೇ ಸಾಯಿಸಿದ್ದರೆ ಒಳ್ಳೆಯದಿತ್ತು ಎಂದು ಅಲವತ್ತುಕೊಂಡಿದ್ದಾರೆ.
ಏಪ್ರಿಲ್ 16ರಿಂದ ಆರಂಭವಾಗಿ ಮೂರು ದಿನ ಚುನಾವಣಾ ಪ್ರಚಾರ ನಡೆಸದಂತೆ ನನ್ನನ್ನು ನಿರ್ಬಂಧಿಸಲಾಗಿತ್ತು. ಇದೀಗ ಅದು ತೆರವುಗೊಂಡಿದೆ. ಆದರೂ, ಅಧಿಕಾರಿಗಳು ನನ್ನನ್ನು ಉಗ್ರನಂತೆ ಕಾಣುತ್ತಿದ್ದಾರೆ. ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Azam khan,SP,bjp,jayaprada