ಬಮಾಕೋ, ಏ.19-ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಕಳೆದ ತಿಂಗಳು 160 ಜನರು ಬಲಿಯಾದ ಹತ್ಯಾಕಾಂಡದ ಹಿನ್ನಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮಾಲಿ ಪ್ರಧಾನಮಂತ್ರಿ ಮತ್ತು ಅವರ ಇಡೀ ಸರ್ಕಾರ ರಾಜೀನಾಮೆ ನೀಡಿದೆ.
ಪ್ರಧಾನಮಂತ್ರಿ ಸೌಮೆಲೊವು ಬೌಬೆಯೇ ಮೈಗಾ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ನೀಡಿರುವ ರಾಜೀನಾಮೆಯನ್ನು ತಾವು ಅಂಗೀಕರಿಸಿರುವುದಾಗಿ ಮಾಲಿ ರಾಷ್ಟ್ರಾಧ್ಯಕ್ಷ ಇಬ್ರಾಂದ ಬೌಬಕರ್ ಕೀಟಾ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ವ್ಯಾಪಕ ಹಿಂಸಾಚಾರ ಮತ್ತು ಹತ್ಯಾಕಾಂಡದ ನಂತರ ದೇಶಾದ್ಯಂತ ಎರಡು ವಾರಗಳಿಂದ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದವು. ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ಸಂಸದರು ಪ್ರಧಾನಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ಮಂತ್ರಿಮಂಡಲ ರಾಜೀನಾಮೆ ನೀಡಿದ್ದು, ಹೊಸ ಪ್ರಧಾನಮಂತ್ರಿ ಮತ್ತು ಸಚಿವರನ್ನು ಶೀಘ್ರ ನೇಮಕ ಮಾಡುವುದಾಗಿ ರಾಷ್ಟ್ರಪತಿ ಅವರ ಕಾರ್ಯಾಲಯ ತಿಳಿಸಿದೆ.