ಬೆಂಗಳೂರು, ಏ.19- ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.
ಮತ ಎಣಿಕೆ ಮೇ 23ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಅಲ್ಲಿಯವರೆಗೂ ಮತಯಂತ್ರಗಳನ್ನು ಆಯಾ ಕ್ಷೇತ್ರದಲ್ಲಿನ ಮತ ಎಣಿಕೆ ಕೇಂದ್ರಗಳ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ.
ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ಮತದಾನ ಮುಕ್ತಾಯಗೊಂಡ ನಂತರ ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರದ ಸ್ಟ್ರಾಂಗ್‍ರೂಂಗಳಿಗೆ ಚುನಾವಣಾ ಸಿಬ್ಬಂದಿ ತಲುಪಿಸಿದ್ದಾರೆ. ಇಂದು ಬೆಳಗ್ಗೆ ಆಯಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಟ್ರಾಂಗ್‍ರೂಮ್‍ಗಳಿಗೆ ಭೇಟಿ ನೀಡಿ ಮತಯಂತ್ರಗಳಿಗೆ ಒದಗಿಸಲಾಗಿರುವ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಮತ ಯಂತ್ರಗಳು ಸ್ಟ್ರಾಂಗ್‍ರೂಮ್‍ನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇಡಲಾಗುತ್ತದೆ. ಮತಯಂತ್ರ ಇಟ್ಟಿರುವ ಸ್ಟ್ರಾಂಗ್‍ರೂಮ್‍ಗಳ ಬಾಗಿಲು, ಕಿಟಕಿಗಳನ್ನು ಸುಲಭವಾಗಿ ತೆರೆಯಲು ಆಗದಂತೆ ಭದ್ರಗೊಳಿಸಲಾಗಿದೆ.
ದಿನದ 24 ಗಂಟೆಯೂ ಸ್ಟ್ರಾಂಗ್ ರೂಮ್‍ಗಳಿಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಲ್ಲಿಯವರೆಗೂ ಸೋಲು-ಗೆಲುವಿನ ಲೆಕ್ಕಾಚಾರದಲ್ಲೇ ನಿರತರಾಗಿರುತ್ತಾರೆ.
ಮತ ಎಣಿಕೆ ಕೇಂದ್ರಗಳ ವಿವರ:
ಉಡುಪಿ-ಚಿಕ್ಕಮಗಳೂರು -ಉಡುಪಿಯ ವಿಜ್ಞಾನ ಸಿಸಿಲಿ ಕಾಲೇಜು, ಹಾಸನ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ದಕ್ಷಿಣ ಕನ್ನಡ-ಸೂರತ್ಕಲ್‍ನ ಎನ್‍ಐಟಿಕೆ ಕಾಲೇಜು, ಚಿತ್ರದುರ್ಗ-ಸರ್ಕಾರಿ ಕಲಾ ಕಾಲೇಜು, ತುಮಕೂರು- ತುಮಕೂರು ವಿಶ್ವವಿದ್ಯಾನಿಲಯ, ಮಂಡ್ಯ-ಸರ್ಕಾರಿ ಬಾಲಕರ ಕಾಲೇಜು, ಮೈಸೂರು- ಮಹಾರಾಣಿ ಕಾಲೇಜು, ಚಾಮರಾಜನಗರ-ಬೇಡರಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಗ್ರಾಮಾಂತರ-ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಉತ್ತರ-ಸೆಂಟ್‍ಜೋಸೆಫ್ ಇಂಡಿಯನ್ ಹೈಸ್ಕೂಲ್, ಬೆಂಗಳೂರು ಕೇಂದ್ರ-ಮೌಂಟ್ ಕಾರ್ಮಲ್ ಮಹಿಳಾ ಪಿಯು ಕಾಲೇಜು, ಬೆಂಗಳೂರು ದಕ್ಷಿಣ- ಜಯನಗರದ ಎಸ್‍ಎಸ್‍ಎಂಆರ್‍ವಿ ಪಿಯು ಕಾಲೇಜು, ಚಿಕ್ಕಬಳ್ಳಾಪುರ-ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು, ಕೋಲಾರ-ಸರ್ಕಾರಿ ಬಾಲಕರ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ.