ಜೈಪುರ್, ಏ.19- ಮುಖ್ಯವಾಹಿನಿಂದ ಹೊರ ಬಿದ್ದಿರುವ ಕಾಂಗ್ರೆಸ್ ಅತ್ಯಂತ ದುರ್ಬಲಗೊಂಡಿದ್ದು, ತುಂಡು ಪಕ್ಷಗಳ ಜೊತೆ ಮೈತಿ ಮಾಡಿಕೊಳ್ಳಬೇಕಾದ ಅನಿವಾರ್ಯ ದುರ್ಗತಿ ಬಂದಿದೆ ಎಂದು ಕೇಂದ್ರ ಸಚಿವ ಮತ್ತು ರಾಜಸ್ತಾನದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯೂ ಆಗಿರುವ ಪ್ರಕಾಶ್ ಜಾವ್ಡೇಕರ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಅವಸಾನದ ಅಂಚು ತಲುಪಿದ್ದು, ಆ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ ಎಂದು ಜೈಪುರದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ತಳ್ಳಿ ಹಾಕಿದರು.
2014ರಲ್ಲಿ ಮೋದಿ ಅವರು ಪ್ರಧಾನಿಯಾಗುತ್ತಿದ್ದಂತೆ ಜನರ ಮತ್ತು ದೇಶದ ಸುಭದ್ರತೆಗಾಗಿ ಹತ್ತು ಹಲವು ಯೋಜನೆಗಳನ್ನು ಕೈಗೊಂಡು ಅವುಗಳೆಲ್ಲವನ್ನೂ ಅನುಷ್ಠಾನಗೊಳಿಸಿದ್ಧಾರೆ. 2019ರ ಚುನಾವಣೆ ನಂತರವೂ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸದಿಂದ ಹೇಳಿದರು.
ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಚುನಾವಣೆಗಳು ನಡೆಯುವುದಿಲ್ಲ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಲ್ಗೋಟ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕಾಶ್, ಪ್ರಜಾಪ್ರಭುತ್ವ ರಕ್ಷಣೆ ಮೋದಿ ಅವರಿಂದ ಮಾತ್ರ ಸಾಧ್ಯ ಎಂದರು.