ನವದೆಹಲಿ, ಏ.19- ಇಂದಿನಿಂದ ಜಾರಿಗೆ ಬರುವಂತೆ ಜಮ್ಮು- ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಾರ ವಹಿವಾಟನ್ನು ಭಾರತ ಅಮಾನತುಗೊಳಿಸಿದೆ. ಇದರಿಂದ ಪಾಕಿಸ್ತಾನದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗಿದೆ.
ಪಾಕಿಸ್ತಾನ ಮೂಲದ ಕೆಲ ದುಷ್ಕರ್ಮಿಗಳು ಗಡಿ ನಿಯಂತ್ರಣ ರೇಖೆ ಆಚೆಯಿಂದ ನಡೆಸುವ ವ್ಯಾಪಾರ-ವ್ಯವಹಾರದ ಮಾರ್ಗವನ್ನು ದುರ್ಬಳಕೆ ಮಾಡಿಕೊಂಡು, ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳು, ನಕಲಿ ನೋಟುಗಳು ಇತ್ಯಾದಿಗಳನ್ನು ಸಾಗಣೆ ಮಾಡುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಎಲ್‍ಒಸಿ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಭಾರತದಲ್ಲಿ ಭಯೋತ್ಪಾನೆ ಮತ್ತು ಪ್ರತ್ಯೇಕತೆ ಉತ್ತೇಜಿಸುತ್ತಿರುವ ನಿಷೇಧಿತ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿರುವುದು ಕಂಡುಬಂದಿದೆ. ಆದ್ದರಿಂದ ಜಮ್ಮು- ಕಾಶ್ಮೀರದ ಚಕ್ಕನ್ -ಡಾ ಬಾಗ್ ಮತ್ತು ಸಲಾಮಾಬಾದ್ ಬಳಿ ಎಲ್‍ಒಸಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ಮಧ್ಯೆ ಹೊಸ ಆದೇಶವನ್ನು ಕಟ್ಟುನಿಟ್ಟಾಗಿ ಕಾರ್ಯಗತ ಗೊಳಿಸಲಾಗುವುದು, ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ವ್ಯಾಪಾರ ವಹಿವಾಟನ್ನು ಪುನರ್ ಆರಂಭಿಸುವ ಸಂಬಂಧ ತದನಂತರ ಮರು ಪರಿಶೀಲಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಗಡಿನಿಯಂತ್ರಣ ರೇಖೆ ಆಚೆಯ ವ್ಯಾಪಾರವು ಜಮ್ಮು ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಧ್ಯೆ ಎರಡು ವಾರಗಳ ನಂತರ ಮಂಗಳವಾರವಷ್ಟೇ ಶುರು ಆಗಿತ್ತು. ಏಪ್ರಿಲ್ ಒಂದನೇ ತಾರೀಕು ಗಡಿ ನಿಯಂತ್ರಣ ರೇಖೆ ಬಳಿ ವ್ಯಾಪಾರ, ಪ್ರಯಾಣ ಎಲ್ಲವನ್ನು ಅಮಾನತು ಮಾಡಲಾಗಿತ್ತು.